Tuesday, October 21, 2025

ಸಂಪುಟ ಪುನರ್‌ರಚನೆ ಸುಳಿವು: ದೀಪಾವಳಿ ನೆಪದಲ್ಲಿ ಸಿಎಂ-ಡಿಸಿಎಂ ‘ಕೈ’ ಹಿಡಿದ ಶಾಸಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಕರ್ನಾಟಕದಲ್ಲಿ ಸಂಪುಟ ಪುನಾರಚನೆ (Cabinet Reshuffle) ಸಾಧ್ಯತೆಯ ನಡುವೆ, ದೀಪಾವಳಿ ಹಬ್ಬದ ನೆಪದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಿವಾಸದ ಮುಂದೆ ಶಾಸಕರ ಸಾಲು ಗಮನ ಸೆಳೆದಿವೆ.

ಹಬ್ಬದ ಶುಭಾಶಯ ಕೋರಲು ಶಾಸಕರು ಇಬ್ಬರ ನಿವಾಸಕ್ಕೆ ಭೇಟಿ ನೀಡಿ, ಹಬ್ಬದ ಶುಭಾಶಯ ಸಲ್ಲಿಸುವೊಂದಿಗೆ ಪರೋಕ್ಷವಾಗಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಸಂಬಂಧಿತ ಮಾತುಕತೆಯನ್ನು ನಡೆಸುತ್ತಿದ್ದಾರೆ.

ಮೂಲಗಳ ಪ್ರಕಾರ, ಈ ಭೇಟಿಗಳು ಹೊಸ ಹುದ್ದೆ ನಿರೀಕ್ಷೆಯಲ್ಲಿ ಇರುವ ಶಾಸಕರ ನಡುವಿನ ಪೈಪೋಟಿ ಕೂಡ ತೋರಿಸುತ್ತಿವೆ. ಅವರು ತಮ್ಮ ಪಕ್ಷದ ಹೈಕಮಾಂಡ್ ಅನುಮೋದನೆಯೊಂದಿಗೆ ಸಂಪುಟದಲ್ಲಿ ಅವಕಾಶ ಪಡೆಯಲು ಈ ಸಮಯವನ್ನು ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಕಳೆದ ದಿನ ನಡೆದ ಸಚಿವರ ಡಿನ್ನರ್ ಸಭೆಯಲ್ಲಿ ಸಂಪುಟ ಪುನಾರಚನೆಯ ಸಾಧ್ಯತೆಯನ್ನು ಸೂಚಿಸಿದ್ದಾಗಿ ವರದಿಯಾಗಿದೆ. ಪೂರ್ವಸಿದ್ಧತೆಯಂತೆ, ಡಿಸೆಂಬರ್‌ನಲ್ಲಿ ಸಂಪುಟ ಪುನಾರಚನೆ ನಡೆದರೆ, ಕೈಬಿಟ್ಟಿರುವ ಸಚಿವರಿಗೆ ಪರ್ಯಾಯ ಹುದ್ದೆ ನೀಡಿ ಗೌರವಯುತವಾಗಿ ಬೀಳ್ಕೊಡುಗೆ ನೀಡಲಾಗುವುದು ಎಂಬ ಮಾಹಿತಿ ದೊರಕಿದೆ.

ಪಕ್ಷದ ಹೈಕಮಾಂಡ್ ಬಿಹಾರ ಚುನಾವಣೆಗಳಲ್ಲಿ ತೊಡಗಿರುವುದರಿಂದ, ಅವರ ಅನುಮೋದನೆಯೊಂದಿಗೆ 12–15 ಹೊಸ ಮುಖಗಳನ್ನು ಸಂಪುಟದಲ್ಲಿ ಸೇರಿಸುವ ಮೂಲಕ ಆಡಳಿತಕ್ಕೆ ಶಕ್ತಿ ತುಂಬುವ ಸಾಧ್ಯತೆ ಇದೆ. ಈ ಮಧ್ಯೆ, ಪಕ್ಷದೊಳಗಿನ ಶಕ್ತಿ ಸಮತೋಲನ ಮತ್ತು ಹೊಸ ಹುದ್ದೆಗಳ ನಿರೀಕ್ಷೆಯೊಂದಿಗೆ ಶಾಸಕರ ಚಟುವಟಿಕೆಗಳು ಸಕ್ರಿಯವಾಗಿದೆ.

error: Content is protected !!