February 27, 2026
Friday, February 27, 2026
spot_img

ಮಧ್ಯರಾತ್ರಿ ಮದ್ಯದ ಅಮಲಿನಲ್ಲಿ ಕಾಲ್, 10 ಸಾವಿರ ರೂ. ಲಂಚಕ್ಕೆ ಬೇಡಿಕೆ: ಬಯಲಾಯ್ತು ಅಧಿಕಾರಿಯ ಅಸಲಿ ರೂಪ!

ಹೊಸದಿಗಂತ ಬೆಳಗಾವಿ:

ಮಹಿಳೆಯರ ರಕ್ಷಣೆ ಮಾಡಬೇಕಾದ ಇಲಾಖೆಯಲ್ಲೇ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ತವರು ಜಿಲ್ಲೆಯಾದ ಬೆಳಗಾವಿಯಲ್ಲಿ ನಡೆದಿದೆ. ಮಹಿಳಾ ವಸತಿ ನಿಲಯವೊಂದರ ವಾರ್ಡನ್ ಮೇಲೆ ಅದೇ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಹಾಗೂ ಜನಾಂಗೀಯ ನಿಂದನೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.

ಮಹಾವೀರ ನಗರದ ನಿವಾಸಿ ಉಮಾದೇವಿ ನಾಗರಾಜ ಮಲಾಜೂರೆ (30) ಎಂಬುವವರು ಸಂತ್ರಸ್ತ ಮಹಿಳೆಯಾಗಿದ್ದು, ಈ ಸಂಬಂಧ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಲಿಖಿತ ದೂರು ನೀಡಿದ್ದಾರೆ. ಆಗಸ್ಟ್ 2024 ರಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ವಾರ್ಡನ್ ಆಗಿ ನೇಮಕಗೊಂಡಿದ್ದ ಇವರಿಗೆ, ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ವಸತಿ ನಿಲಯದ ಆದಾಯದಲ್ಲಿ ಪ್ರತಿ ತಿಂಗಳು ₹10,000 ಹಣ ನೀಡುವಂತೆ ಅಧಿಕಾರಿ ಒತ್ತಾಯಿಸುತ್ತಿದ್ದರು. ಹಣ ನೀಡಲು ನಿರಾಕರಿಸಿದಾಗ ಕಚೇರಿಯಲ್ಲಿ ತಡರಾತ್ರಿವರೆಗೆ ಕೂರಿಸುವುದು, ಖಾಸಗಿ ವಾಹನದಲ್ಲಿ ಗೋವಾಕ್ಕೆ ಬರುವಂತೆ ಪೀಡಿಸುವುದು ಹಾಗೂ ಮದ್ಯಪಾನ ಮಾಡಿ ರಾತ್ರಿ ವೇಳೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಸಂತ್ರಸ್ತೆಯ ಪತಿಯ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿ ಸಂಸಾರದಲ್ಲಿ ಜಗಳ ತಂದಿಡಲು ಪ್ರಯತ್ನಿಸಿದ್ದಲ್ಲದೆ, ಜನಾಂಗೀಯವಾಗಿ ನಿಂದಿಸಿ ಅವಮಾನಿಸಿದ್ದಾರೆ ಎನ್ನಲಾಗಿದೆ.

ಅಧಿಕಾರಿಯ ಈ ಕಾಟ ತಾಳಲಾರದೆ ಸಂತ್ರಸ್ತ ಮಹಿಳೆ ಕೆಲಸಕ್ಕೆ ಹೋಗುವುದನ್ನೇ ನಿಲ್ಲಿಸಿದ್ದು, ಈಗ ನ್ಯಾಯಕ್ಕಾಗಿ ಪೊಲೀಸ್ ಇಲಾಖೆಯ ಮೆಟ್ಟಿಲೇರಿದ್ದಾರೆ. ಸಚಿವರ ಸ್ವಂತ ಜಿಲ್ಲೆಯಲ್ಲೇ ಇಂತಹ ಘಟನೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !