ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೀದಿ ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ, ಈ ನಾಯಿ ಕಚ್ಚಬಹುದು, ಈ ನಾಯಿ ಕಚ್ಚುವುದಿಲ್ಲ ಎಂದು ಕಂಡು ಹಿಡಿಯುವುದು ಅಸಾಧ್ಯ ಎಂದು ಬೀದಿ ನಾಯಿಗಳ ಹಾವಳಿ ಬಗ್ಗೆ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ಅಪಾಯಕಾರಿ ನಾಯಿಗಳನ್ನು ನಡವಳಿಕೆಯಿಂದ ಮಾತ್ರ ಗುರುತಿಸುವುದು ಅಸಾಧ್ಯವೆಂದಿದ್ದಾರೆ.
ರಸ್ತೆಗಳು ಮತ್ತು ಬೀದಿಗಳಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ನಿರ್ವಹಿಸುವಲ್ಲಿನ ಸವಾಲನ್ನು ಪೀಠವು ಒತ್ತಿ ಹೇಳಿದೆ. ಶಾಲೆಗಳು, ಆಸ್ಪತ್ರೆಗಳು ಅಥವಾ ನ್ಯಾಯಾಲಯಗಳ ಒಳಗೆ ಬೀದಿ ನಾಯಿಗಳು ಏಕಿರಬೇಕು ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಅಂತಹ ಸೂಕ್ಷ್ಮ ಆವರಣಗಳಿಂದ ನಾಯಿಗಳನ್ನು ಓಡಿಸುವಲ್ಲಿ ನಿಮಗಾಗುವ ತೊಂದರೆಗಳೇನು ಎಂದು ಕೇಳಿದೆ.
ಕಳೆದ ವರ್ಷ ನವೆಂಬರ್ 7 ರಂದು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ರೈಲ್ವೆ ನಿಲ್ದಾಣಗಳಂತಹ ಸಾಂಸ್ಥಿಕ ಪ್ರದೇಶಗಳಲ್ಲಿ ನಾಯಿ ಕಡಿತದ ಘಟನೆಗಳಲ್ಲಿ ಆತಂಕಕಾರಿ ಹೆಚ್ಚಳ ಗಮನಿಸಿದ ಸುಪ್ರೀಂ ಕೋರ್ಟ್, ದೆಹಲಿ-ಎನ್‌ಸಿಆರ್‌ನಲ್ಲಿ ಸಂತಾನಹರಣ ಮಾಡಿ , ಲಸಿಕೆ ಹಾಕಿದ ನಂತರ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ತಕ್ಷಣವೇ ಸ್ಥಳಾಂತರಿಸುವಂತೆ ನಿರ್ದೇಶನ ನೀಡಿತ್ತು.
ಬೀದಿ ನಾಯಿಗಳನ್ನು ಎಲ್ಲಿಂದ ಕರೆದುಕೊಂಡು ಹೋಗಿರುತ್ತೀರೋ ಮತ್ತೆ ಅದೇ ಸ್ಥಳಕ್ಕೆ ಬಿಡುವಂತೆಯೂ ಪೀಠವು ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ರಾಜ್ಯ ಹೆದ್ದಾರಿಗಳು, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಿಂದ ಎಲ್ಲಾ ದನಗಳು ಮತ್ತು ಇತರ ಬೀದಿ ಪ್ರಾಣಿಗಳನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು ಮೂವರು ನ್ಯಾಯಮೂರ್ತಿಗಳ ವಿಶೇಷ ಪೀಠವು ಅಧಿಕಾರಿಗಳಿಗೆ ನಿರ್ದೇಶನ ನೀಡಿತು.

