ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಅಮೆರಿಕ ಸೇನೆ ವೆನೆಜುವೆಲಾದ ಮೇಲೆ ದಾಳಿ ನಡೆಸಿ ಅಧ್ಯಕ್ಷ ನಿಕೋಲಾಸ್ ಮಡುರೊ ಅವರನ್ನು ಬಂಧಿಸಿತ್ತು. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌಹಾಣ್ ನಾಲಗೆ ಹರಿಯಬಿಟ್ಟಿದ್ದು, ‘ವೆನೆಜುವೆಲಾದಲ್ಲಿ ಆದಂತೆ ಭಾರತದಲ್ಲೂ ಆಗುತ್ತಾ? ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪಹರಿಸುತ್ತಾರ?ʼ ಎಂದು ಪ್ರಶ್ನಿಸುವ ಮೂಲಕ ವಿವಾದದ ಅಲೆ ಎಬ್ಬಿಸಿದ್ದಾರೆ.
ಭಾರತದ ವಿರುದ್ಧ ಅಮೆರಿಕದ ವ್ಯಾಪಾರ ನೀತಿಯನ್ನು ಟೀಕಿಸಿದ ಪೃಥ್ವಿರಾಜ್ ಚೌಹಾಣ್ , ಪ್ರಸ್ತಾವಿತ ಶೇ. 50ರಷ್ಟು ಸುಂಕವು ಭಾರತ-ಅಮೆರಿಕ ವ್ಯಾಪಾರವನ್ನು ಪರಿಣಾಮಕಾರಿಯಾಗಿ ಕುಂಠಿತಗೊಳಿಸುತ್ತದೆ ಎಂದು ವಾದಿಸಿದರು. ‘ಭಾರತದ ಉತ್ಪನ್ನಗಳನ್ನು ನೇರ ನಿಷೇಧಿಸಲು ಸಾಧ್ಯವಾಗದ ಕಾರಣ ಸುಂಕಗಳನ್ನು ವಿಧಿಸಲಾಗುತ್ತಿದೆ. ಭಾರತ ಈ ಹೆಚ್ಚುವರಿ ಭಾರವನ್ನು ಭರಿಸಬೇಕಾಗುತ್ತದೆ. ಈ ಹಿಂದೆ ಅಮೆರಿಕಕ್ಕೆ ರಫ್ತು ಮಾಡುವುದರಿಂದ ಗಳಿಸಿದ ಲಾಭ ಇನ್ನುಮುಂದೆ ಭಾರತೀಯರಿಗೆ ಲಭ್ಯವಿರುವುದಿಲ್ಲ. ನಾವು ಪರ್ಯಾಯ ಮಾರುಕಟ್ಟೆಗಳನ್ನು ಹುಡುಕಬೇಕಾಗುತ್ತದೆ ಮತ್ತು ಆ ದಿಕ್ಕಿನಲ್ಲಿ ಪ್ರಯತ್ನಗಳು ಈಗಾಗಲೇ ನಡೆಯುತ್ತಿವೆ’ಎಂದು ಹೇಳಿದರು. ಈ ವೇಳೆ ಅವರು ಟ್ರಂಪ್ ವೆನೆಜುವೆಲಾ ಅಧ್ಯಕ್ಷರಂತೆ ಭಾರತೀಯ ಪ್ರಧಾನಿ ಮೋದಿಯನ್ನೂ ಅಪಹರಿಸಬಹುದಾ? ಎಂದು ಪ್ರಶ್ನಿಸಿದರು.
ಬಿಜೆಪಿಯಿಂದ ತೀವ್ರ ವಿರೋಧ
ಸದ್ಯ ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಈ ಬಗ್ಗೆ ಪ್ರತಿಕ್ರಿಯಿಸಿ, ‘ʼಕಾಂಗ್ರೆಸ್ ದಿನೇ ದಿನೆ ಅಧಃಪತನಕ್ಕೆ ಇಳಿಯುತ್ತಿದೆ. ಪೃಥ್ವಿರಾಜ್ ಚೌಹಾಣ್ ಭಾರತದ ಪರಿಸ್ಥಿತಿಯನ್ನು ವೆನೆಜುವೆಲಾ ಜತೆ ನಾಚಿಕೆಯಿಲ್ಲದೆ ಹೋಲಿಸುತ್ತಿದ್ದಾರೆ. ವೆನೆಜುವೆಲಾದಲ್ಲಿ ನಡೆದದ್ದು ಭಾರತದಲ್ಲಿಯೂ ಆಗಬಹುದೇ? ಎಂದು ಕೇಳುವ ಮೂಲಕ ಕಾಂಗ್ರೆಸ್ ತನ್ನ ಭಾರತ ವಿರೋಧಿ ಮನಸ್ಥಿತಿಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ರಾಹುಲ್ ಗಾಂಧಿ ಭಾರತದಲ್ಲಿ ಅವ್ಯವಸ್ಥೆಯನ್ನು ಬಯಸುತ್ತಾರೆ. ರಾಹುಲ್ ಗಾಂಧಿ ಭಾರತದ ವ್ಯವಹಾರಗಳಲ್ಲಿ ವಿದೇಶಿ ಹಸ್ತಕ್ಷೇಪವನ್ನು ಎದುರು ನೋಡುತ್ತಿದ್ದಾರೆʼ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಉನ್ನತ ಪೊಲೀಸ್ ಅಧಿಕಾರಿ ಎಸ್.ಪಿ. ವೈದ್ ಕೂಡ ಟೀಕಿಸಿದ್ದು, ಟ್ರಂಪ್ ವೆನೆಜುವೆಲಾ ವಿರುದ್ಧ ಕೈಗೊಂಡ ಕ್ರಮವನ್ನು ಭಾರತದ ವಿರುದ್ಧವೂ ಕೈಗೊಳ್ಳಬೇಕೆಂದು ಪೃಥ್ವಿರಾಜ್ ಬಯಸುವುದು ಇಡೀ ದೇಶಕ್ಕೆ ಅವಮಾನ. ಮಾತನಾಡುವ ಮೊದಲು ಕನಿಷ್ಠ ಪಕ್ಷ ಯೋಚಿಸಬೇಕು ಅಥವಾ ಇದು ಈಗ ಬಹಿರಂಗವಾಗಿ ಹೊರಬರುತ್ತಿರುವ ಕಾಂಗ್ರೆಸ್‌ನ ನಿಜವಾದ ಸಿದ್ಧಾಂತವೇ? ಎಂದು ಪ್ರಶ್ನಿಸಿದರು.

