ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ ಈಗ ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಶಕ್ತಿಯ ಸ್ಪರ್ಶ ಲಭಿಸಿದೆ. ಭಾರತದ ಪ್ರವಾಸದಲ್ಲಿರುವ ಕೆನಡಾದ ಪ್ರಧಾನ ಮಂತ್ರಿ ಮಾರ್ಕ್ ಕಾರ್ನಿ, ಇಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಉಭಯ ದೇಶಗಳ ಸ್ನೇಹದ ಬಗ್ಗೆ ಮನಬಿಚ್ಚಿ ಮಾತನಾಡಿದರು.
ತಮ್ಮ ಭಾಷಣದಲ್ಲಿ 1893ರ ಇತಿಹಾಸವನ್ನು ಮೆಲುಕು ಹಾಕಿದ ಕಾರ್ನಿ, ಸ್ವಾಮಿ ವಿವೇಕಾನಂದರು ಚಿಕಾಗೋ ವಿಶ್ವ ಧರ್ಮ ಸಮ್ಮೇಳನಕ್ಕೆ ತೆರಳುವ ಮಾರ್ಗಮಧ್ಯೆ ಕೆನಡಾಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದರು. “ವಿವೇಕಾನಂದರು ಕೆನಡಾದಲ್ಲಿ ಕಳೆದ ಆ ಕ್ಷಣಗಳು ಇಂದಿಗೂ ನಮ್ಮ ಸಂಬಂಧದ ಬೆಸುಗೆಯಾಗಿವೆ,” ಎಂದು ಅವರು ಅಭಿಪ್ರಾಯಪಟ್ಟರು.
ಭಾರತ-ಕೆನಡಾ ಪಾಲುದಾರಿಕೆಗೆ ಹೊಸ ವೇಗ ನೀಡುವ ಸಂಕಲ್ಪ ಮಾಡಿದ ಪ್ರಧಾನಿ ಕಾರ್ನಿ, ವಿವೇಕಾನಂದರ ಪ್ರಖ್ಯಾತ ಸಂದೇಶವಾದ “ಏಳಿ, ಎದ್ದೇಳಿ, ಗುರಿ ತಲುಪುವವರೆಗೆ ನಿಲ್ಲಬೇಡಿ” ಎಂಬ ಸಾಲುಗಳನ್ನು ಉಲ್ಲೇಖಿಸಿದರು. “ಭಾರತದೊಂದಿಗಿನ ಈ ಸ್ನೇಹದ ಹಾದಿಯಲ್ಲಿ ನಾವು ನಿಗದಿತ ಗುರಿಗಳನ್ನು ತಲುಪುವವರೆಗೂ ವಿಶ್ರಮಿಸುವುದಿಲ್ಲ,” ಎಂದು ಅವರು ದೃಢವಾಗಿ ಹೇಳಿದರು.
ಈ ಭಾಷಣವು ಉಭಯ ದೇಶಗಳ ನಡುವಿನ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳಿಗೆ ಹೊಸ ಆಯಾಮ ನೀಡುವ ಮುನ್ಸೂಚನೆ ನೀಡಿದೆ.



