Monday, September 15, 2025

ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ಗೂ ಬಾರದೆ ಓಡಿಹೋದ ಕ್ಯಾಪ್ಟನ್ ಅಲಿ! ಪಾಕ್ ಕೋಚ್ ಏನಂದ್ರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

2025ರ ಏಷ್ಯಾಕಪ್‌ನಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿದ ಬಳಿಕ ಮೈದಾನದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಸಾಮಾನ್ಯವಾಗಿ ಪಂದ್ಯ ಮುಗಿದ ನಂತರ ಉಭಯ ತಂಡಗಳ ನಾಯಕರು ಹಾಗೂ ಆಟಗಾರರು ಪರಸ್ಪರ ಕೈಕುಲುಕುವುದು ರೂಢಿಯಾಗಿದೆ. ಆದರೆ ಈ ಬಾರಿ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕದೆ ನೇರವಾಗಿ ಡ್ರೆಸ್ಸಿಂಗ್ ರೂಮ್ ಕಡೆಗೆ ಹೋದರು. ಇದರಿಂದ ಪಾಕಿಸ್ತಾನಿ ಆಟಗಾರರ ಅಸಮಾಧಾನ ಮೈದಾನದಲ್ಲೇ ವ್ಯಕ್ತವಾಗಿತ್ತು.

ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಭಾಗವಹಿಸಲಿಲ್ಲ. ಇದರಿಂದ ಕ್ರಿಕೆಟ್ ಅಭಿಮಾನಿಗಳ ನಡುವೆ ಹಲವಾರು ಚರ್ಚೆಗಳು ಹುಟ್ಟಿಕೊಂಡಿವೆ. ಕೆಲವರು ಇದನ್ನು ಪಾಕಿಸ್ತಾನಿ ನಾಯಕನ ಪ್ರತಿಭಟನೆಯೆಂದು ಹೇಳಿದರೆ, ಇನ್ನೂ ಕೆಲವರು ಸೋಲಿನಿಂದ ನಾಚಿಕೆ ಆಗಿ ದೂರ ಉಳಿದಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತ-ಪಾಕ್ ಪಂದ್ಯದಲ್ಲಿ ಪಂದ್ಯ ಮುಗಿದ ನಂತರ, ಪತ್ರಿಕಾಗೋಷ್ಠಿ ಇರುತ್ತದೆ. ಎರಡೂ ತಂಡಗಳ ನಾಯಕರು ಪಂದ್ಯದ ನಂತರದ ಸಂದರ್ಶನಕ್ಕೆ ಹೋಗುತ್ತಾರೆ. ಗೆದ್ದ ಮತ್ತು ಸೋತ ನಾಯಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಮೈದಾನದಲ್ಲಿ ಎಲ್ಲವೂ ಮುಗಿದ ನಂತರ, ಮಾಧ್ಯಮಗಳಿಗಾಗಿ ಪತ್ರಿಕಾಗೋಷ್ಠಿ ಇರುತ್ತದೆ. ಸಾಮಾನ್ಯವಾಗಿ ನಾಯಕ ಮಾತ್ರ ಇದಕ್ಕೆ ಬರುತ್ತಾರೆ. ಕೆಲವೊಮ್ಮೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಸಹ ಬರುತ್ತಾರೆ, ಆದರೆ ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧದ ಸೋಲಿನ ನಂತರ, ಪಾಕಿಸ್ತಾನದ ನಾಯಕ ಪಂದ್ಯದ ನಂತರದ ಸಂದರ್ಶನಕ್ಕೂ ಬರಲಿಲ್ಲ ಅಥವಾ ಪತ್ರಿಕಾಗೋಷ್ಠಿಗೂ ಬರಲಿಲ್ಲ.

ಈ ಬಗ್ಗೆ ಸ್ಪಷ್ಟನೆ ನೀಡಿದ ಪಾಕಿಸ್ತಾನ ತಂಡದ ಮುಖ್ಯ ಕೋಚ್ ಮೈಕ್ ಹೆಸ್ಸನ್ ಅವರು, “ನಾವು ಪಂದ್ಯದ ಕೊನೆಯಲ್ಲಿ ಕೈಕುಲುಕಲು ಸಿದ್ಧರಾಗಿದ್ದೆವು. ಆದರೆ ಭಾರತೀಯ ಆಟಗಾರರು ಡ್ರೆಸ್ಸಿಂಗ್ ರೂಮ್‌ಗೆ ಹೋದವರು ಮತ್ತೆ ಬರಲಿಲ್ಲ. ಈ ಘಟನೆ ನಮಗೆ ನಿರಾಸೆ ಮೂಡಿಸಿದೆ” ಎಂದು ಪ್ರತಿಕ್ರಿಯಿಸಿದರು.

ಟಾಸ್ ಸಮಯದಲ್ಲಿಯೂ ಸಹ ಸೂರ್ಯಕುಮಾರ್ ಯಾದವ್, ಪಾಕಿಸ್ತಾನ ನಾಯಕನೊಂದಿಗೆ ಕೈಕುಲುಕಿರಲಿಲ್ಲ ಎಂಬುದು ಈಗ ಹೆಚ್ಚುವರಿ ಚರ್ಚೆಗೆ ಕಾರಣವಾಗಿದೆ. ಗೆಲುವಿನ ಸಿಕ್ಸ್ ಬಾರಿಸಿದ ಬಳಿಕ ತಮ್ಮ ಸಹ ಆಟಗಾರ ಶಿವಂ ದುಬೆ ಅವರೊಂದಿಗೆ ಕೇವಲ ಕೈಕುಲುಕಿದ ಸೂರ್ಯಕುಮಾರ್, ಪಾಕಿಸ್ತಾನಿ ಆಟಗಾರರನ್ನು ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ