ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಐಪಿಎಲ್ ಮಹಾಸಮರ ಆರಂಭಕ್ಕೂ ಮುನ್ನವೇ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ತಂಡದ ಯಶಸ್ವಿ ನಾಯಕ, ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯ ಆರಂಭಿಕ ಪಂದ್ಯಗಳಿಂದ ಹೊರಬಿದ್ದಿದ್ದು, ಅವರ ಬದಲಿಗೆ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಅವರನ್ನು ನೂತನ ನಾಯಕನನ್ನಾಗಿ ನೇಮಕ ಮಾಡಲಾಗಿದೆ.
ಕಳೆದ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಪ್ಯಾಟ್ ಕಮ್ಮಿನ್ಸ್ ಇಂಜುರಿಯಿಂದಾಗಿ ಅಲಭ್ಯರಾಗುವುದು ಖಚಿತವಾಗುತ್ತಿದ್ದಂತೆಯೇ, ಹೈದರಾಬಾದ್ ತಂಡಕ್ಕೆ ಹೊಸ ಸಾರಥಿಯ ಹುಡುಕಾಟ ಶುರುವಾಗಿತ್ತು. ಆರಂಭದಲ್ಲಿ ಯುವ ಆಟಗಾರ ಅಭಿಷೇಕ್ ಶರ್ಮಾ ಅವರ ಹೆಸರು ಮುಂಚೂಣಿಯಲ್ಲಿದ್ದರೂ, ಅಂತಿಮವಾಗಿ ಆಡಳಿತ ಮಂಡಳಿ ಅನುಭವ ಮತ್ತು ಫಾರ್ಮ್ಗೆ ಮನ್ನಣೆ ನೀಡಿ ಇಶಾನ್ ಕಿಶನ್ ಅವರಿಗೆ ಪಟ್ಟ ಕಟ್ಟಿದೆ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಇಶಾನ್ ಕಿಶನ್ ಪಾತ್ರ ಅತಿ ದೊಡ್ಡದಾಗಿತ್ತು. ಟೂರ್ನಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದ ಕಿಶನ್, ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿಗಳನ್ನು ನಡುಗಿಸಿದ್ದರು. ಈ ಅಮೋಘ ಫಾರ್ಮ್ ಮತ್ತು ಪಂದ್ಯವನ್ನು ಗೆಲ್ಲಿಸಿಕೊಡುವ ಅವರ ಸಾಮರ್ಥ್ಯವೇ ಅವರಿಗೆ ನಾಯಕತ್ವ ಸಿಗಲು ಪ್ರಮುಖ ಕಾರಣವಾಗಿದೆ.
ಐಪಿಎಲ್ನಲ್ಲಿ ಸುದೀರ್ಘ ಅನುಭವ ಹೊಂದಿದ್ದರೂ, ಇಶಾನ್ ಕಿಶನ್ ಅವರಿಗೆ ನಾಯಕನಾಗಿ ಇದು ಮೊದಲ ಪರೀಕ್ಷೆ. ಕಿಶನ್ ಅವರಿಗೆ ಸಾಥ್ ನೀಡಲು ತಂಡದ ಮತ್ತೊಬ್ಬ ಸ್ಟಾರ್ ಆಟಗಾರ ಅಭಿಷೇಕ್ ಶರ್ಮಾ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ.
ಒಟ್ಟಿನಲ್ಲಿ, ಅನುಭವಿ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಇಬ್ಬರು ಯುವ ಆಟಗಾರರ ನೇತೃತ್ವದಲ್ಲಿ ‘ಆರೆಂಜ್ ಆರ್ಮಿ’ ಈ ಬಾರಿ ಮೈದಾನದಲ್ಲಿ ಯಾವ ರೀತಿ ಅಬ್ಬರಿಸಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.



