ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಕೆಂಪು ಕೋಟೆ ಸಮೀಪ ಸಂಜೆ ಕಾರು ಸ್ಫೋಟಗೊಂಡು ಕ್ಷಣಾರ್ಧದಲ್ಲೇ ಬೆಂಕಿ ವ್ಯಾಪಿಸಿದ್ದು,ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ ಆಗಿದೆ. ಸದ್ಯ ಎಲ್ಲೆಡೆ ಹೈಅಲರ್ಟ್ ಘೋಷಿಸಲಾಗಿದೆ.
ಈ ಮಧ್ಯೆ ದೆಹಲಿ ಸಮೀಪದ ಹರಿಯಾಣದ ಫರಿದಾಬಾದ್‌ನಲ್ಲಿ ಸುಮಾರು 350 ಕೆಜಿ ಸ್ಫೋಟಕದೊಂದಿಗೆ ಶಂಕಿತ ಉಗ್ರ ಸೆರೆಯಾಗಿದ್ದು, ಇದು ಭಯೋತ್ಪಾದಕರ ವಿದ್ವಂಸಕ ಕೃತ್ಯದ ಭಾಗವೇ ಎನ್ನುವ ಅನುಮಾನ ಹುಟ್ಟು ಹಾಕಿದೆ.
ಸದ್ಯ ಕಾರು ಸ್ಫೋಟಕ್ಕೆ ಕಾರಣ ತಿಳಿದು ಬಂದಿಲ್ಲ. ಮೂಲಗಳ ಪ್ರಕಾರ ಕಾರಿನ ಸಿಎನ್‌ಜಿ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಅವಘಡ ಸಂಭವಿಸಿದೆ. ಅದಾಗ್ಯೂ ಈ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ. ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಮಧ್ಯೆ ಉಗ್ರರ ನೆರಳು ಈ ಸ್ಫೋಟದ ಹಿಂದಿದ್ಯಾ ಎನ್ನುವ ಸಂಶಯ ಮೂಡತೊಡಗಿದೆ.
ಹರಿಯಾಣದ ಫರಿದಾಬಾದ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳು ಪ್ರಮುಖ ಭಯೋತ್ಪಾದಕ ಸಂಚನ್ನು ವಿಫಲಗೊಳಿಸಿದ ಕೆಲವೇ ಗಂಟೆಗಳ ನಂತರ ಈ ಸ್ಫೋಟ ಸಂಭವಿಸಿದ್ದು ಅನುಮಾನಕ್ಕೆ ಕಾರಣ. ಪರಿಶೀಲನೆ ವೇಳೆ ಭದ್ರತಾ ಪಡೆಗಳು 360 ಕೆಜಿಯಷ್ಟು ಅಮೋನಿಯಂ ನೈಟ್ರೇಟ್, ಅಸಾಲ್ಟ್ ರೈಫಲ್ ಮತ್ತು ಇತರ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ. ಜತೆಗೆ ಈ ಸ್ಫೋಟಕಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ವೈದ್ಯ ಡಾ. ಮುಜಮ್ಮಿಲ್ ಶಕೀಲ್ (35)ನನ್ನು, ಆತನಿಗೆ ನೆರವಾದ ವೈದ್ಯೆಯನ್ನೂ ಬಂಧಿಸಲಾಗಿದೆ.
ದೇಶಾದ್ಯಂತ ಹೈ ಅಲರ್ಟ್ ಘೋಷಣೆ
ದೆಹಲಿಯಲ್ಲಿ ಕಾರು ಸ್ಫೋಟಗೊಳ್ಳುತ್ತಿದ್ದಂತೆ ದೇಶದ ಪ್ರಮುಖ ನಗರಗಳಾದ ಮುಂಬೈ, ಕೋಲ್ಕತ್ತಾ, ಉತ್ತರ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮುಂಬೈಯ ಎಲ್ಲ ಪೊಲೀಸ್ ಠಾಣೆಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಜಾಗರೂಕರಾಗಿರಲು ಸೂಚಿಸಲಾಗಿದೆ. ರೈಲ್ವೆ ನಿಲ್ದಾಣಗಳು, ಮಾರುಕಟ್ಟೆಗಳು, ಧಾರ್ಮಿಕ ಸ್ಥಳಗಳು ಮತ್ತು ಪ್ರವಾಸಿ ತಾಣಗಳು ಸೇರಿದಂತೆ ಜನದಟ್ಟಣೆ ಮತ್ತು ಸೂಕ್ಷ್ಮ ವಲಯಗಳಲ್ಲಿ ಗಸ್ತು ತಿರುಗುವಿಕೆಯನ್ನು ಹೆಚ್ಚಿಸಲು ನಿರ್ದೇಶನ ನೀಡಲಾಗಿದೆ.

