ಹೊಸದಿಗಂತ ವರದಿ ಮಡಿಕೇರಿ:
ಕಾರಿನ ಮೇಲೆ ಕಾಡುಕೋಣ ದಾಳಿ ನಡೆಸಿ ವಾಹನ ಜಖಂಗೊಳಿಸಿದ ಘಟನೆ ವೀರಾಜಪೇಟೆ ತಾಲೂಕಿನ ಸಿದ್ದಾಪುರ ವ್ಯಾಪ್ತಿಯ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.
ಆರೆಂಜ್ ಕೌಂಟಿ ಮಾಲಕ ಇಮ್ಯಾನುವೆಲ್ ರಾಮಪುರಂ ಅವರು ಸಿದ್ದಾಪುರ ಪಟ್ಟಣದತ್ತ ತೆರಳುತ್ತಿದ್ದ ವೇಳೆ, ಒಂದು ತೋಟದಿಂದ ಮತ್ತೊಂದು ತೋಟಕ್ಕೆ ವೇಗವಾಗಿ ದಾಟುತ್ತಿದ್ದ ಕಾಡುಕೋಣ ಕಾರಿಗೆ ಗುದ್ದಿದೆ. ಪರಿಣಾಮ ಕಾರಿನ ಮುಂಭಾಗದ ಭಾಗಕ್ಕೆ ಹಾನಿಯಾಗಿದ್ದು, ವಾಹನ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ:
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ಶಿವರಾಮ್, ಉಪ ವಲಯ ಅರಣ್ಯ ಅಧಿಕಾರಿ ಸಂಜಿತ್ ಸೋಮಯ್ಯ, ಆರ್ ಟಿ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿದ್ದಾಪುರ ಭಾಗದಲ್ಲಿ ಇತ್ತೀಚೆಗೆ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು, ಸುಮಾರು 20 ದಿನಗಳ ಹಿಂದೆ ಇದೇ ಭಾಗದಲ್ಲಿ ಗೂಡ್ಸ್ ಆಟೋದ ಮೇಲೆ ಕಾಡುಕೋಣ ದಾಳಿ ನಡೆಸಿತ್ತು. ಅಲ್ಲದೆ, ಕೆಲ ದಿನಗಳ ಹಿಂದೆ ಕಾರಿನ ಮೇಲೆ ಕಾಡಾನೆ ದಾಳಿ ಮಾಡಿತ್ತು.
ಸಿದ್ದಾಪುರ–ಕರಡಿಗೋಡು ಮುಖ್ಯ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಕಳೆದ 10 ದಿನಗಳಿಂದ ಗ್ರಾಮಸ್ಥರು ಪರ್ಯಾಯವಾಗಿ ಕೆಸುವಿನಹಳ್ಳ-ಮೈಸೂರು ರಸ್ತೆಯನ್ನು ಬಳಸುತ್ತಿದ್ದಾರೆ. ಆದರೆ ಈ ರಸ್ತೆಯಲ್ಲೂ ವನ್ಯಮೃಗಗಳ ಉಪಟಳ ಹೆಚ್ಚಿರುವುದರಿಂದ ಸ್ಥಳೀಯರು ಭಯದಿಂದ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವನ್ಯಮೃಗಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.



