Tuesday, January 13, 2026
Tuesday, January 13, 2026
spot_img

ಸ್ನಾನಗೃಹದಲ್ಲಿ ಗೀಸರ್‌ನ ಕಾರ್ಬನ್ ಮಾನಾಕ್ಸೈಡ್ ಸೋರಿಕೆ; ಉಸಿರುಗಟ್ಟಿ ಅಕ್ಕ-ತಂಗಿ ಸಾವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಮನಕಲಕುವ ದುರಂತವೊಂದು ಸಂಭವಿಸಿದೆ. ಮನೆಯ ಸ್ನಾನಗೃಹದಲ್ಲಿದ್ದ ಗ್ಯಾಸ್‌ ಗೀಸರ್‌ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾದ ಪರಿಣಾಮ, ಅಕ್ಕ-ತಂಗಿಯರಿಬ್ಬರೂ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಬೆಟ್ಟದಪುರ ಗ್ರಾಮದ ಸಿಮ್ರಾನ್ ತಾಜ್ (23) ಮತ್ತು ಅವರ ಸಹೋದರಿ ಗುಲ್ಫರ್ಮ್ ತಾಜ್ (20) ದುರಂತ ಅಂತ್ಯ ಕಂಡ ಯುವತಿಯರು.

ದುರಂತ ನಡೆದಿದ್ದು ಹೇಗೆ?

ಘಟನೆಯ ದಿನ ಸಹೋದರಿಯರಾದ ಸಿಮ್ರಾನ್ ತಾಜ್ ಮತ್ತು ಗುಲ್ಫರ್ಮ್ ತಾಜ್ ಒಟ್ಟಿಗೆ ಸ್ನಾನ ಮಾಡಲು ಬಾತ್‌ರೂಂಗೆ ತೆರಳಿದ್ದರು. ಈ ವೇಳೆ ಸ್ನಾನದ ಕೋಣೆಯಲ್ಲಿ ಅಳವಡಿಸಿದ್ದ ಗ್ಯಾಸ್‌ ಗೀಸರ್‌ನಿಂದ ಮಾರಕವಾದ ಕಾರ್ಬನ್ ಮಾನಾಕ್ಸೈಡ್ ವಿಷಾನಿಲ ಸೋರಿಕೆಯಾಗಿದೆ.

ಸ್ನಾನದ ಕೋಣೆಯಲ್ಲಿ ಸೂಕ್ತ ಗಾಳಿಯಾಡಲು ಕಿಟಕಿ ಇಲ್ಲದ ಕಾರಣ, ಸೋರಿಕೆಯಾದ ವಿಷಾನಿಲ ಹೊರಹೋಗದೆ ಒಳಗೆ ತುಂಬಿಕೊಂಡಿತ್ತು. ಇದರ ಪರಿಣಾಮವಾಗಿ ಸಹೋದರಿಯರು ಆ ವಿಷಾನಿಲವನ್ನು ಉಸಿರಾಡಿ, ಪ್ರಜ್ಞೆ ಕಳೆದುಕೊಂಡು ಸ್ಥಳದಲ್ಲಿಯೇ ಕುಸಿದುಬಿದ್ದಿದ್ದಾರೆ.

ಹೆಣ್ಣುಮಕ್ಕಳು ಸ್ನಾನಕ್ಕೆ ಹೋಗಿ ಬಹಳ ಸಮಯ ಕಳೆದರೂ ಹೊರಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಅವರ ತಂದೆ ಅಲ್ತಾಫ್‌ ಅವರು ಬಾತ್‌ರೂಂ ಬಾಗಿಲು ಬಡಿದಿದ್ದಾರೆ. ಒಳಗೆ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಗಾಬರಿಗೊಂಡು ಬಾಗಿಲು ಹೊಡೆದು ನೋಡಿದಾಗ, ಇಬ್ಬರು ಮಕ್ಕಳು ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸ್ನಾನದ ಕೋಣೆಯಲ್ಲಿ ಗಾಳಿಯ ಓಡಾಟಕ್ಕೆ ಕಿಟಕಿ ಇಲ್ಲದ ಕಾರಣವೇ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಕುರಿತು ಪಿರಿಯಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Most Read

error: Content is protected !!