February 26, 2026
Thursday, February 26, 2026
spot_img

ನಗದು ರಾಶಿ ಪತ್ತೆ ಪ್ರಕರಣ: ನ್ಯಾಯಮೂರ್ತಿ ವರ್ಮಾ ಭವಿಷ್ಯ ನಿರ್ಧರಿಸಲಿದೆ ಓಂ ಬಿರ್ಲಾ ಸಮಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ನಿವಾಸದಲ್ಲಿ ಪತ್ತೆಯಾದ ಅಪಾರ ಪ್ರಮಾಣದ ಸುಟ್ಟು ಕರಕಲಾದ ನಗದು ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ತನಿಖೆಯನ್ನು ತೀವ್ರಗೊಳಿಸಲಾಗಿದೆ. ಪ್ರಕರಣದ ತನಿಖೆಗಾಗಿ ರಚಿಸಲಾಗಿದ್ದ ತ್ರಿಸದಸ್ಯ ಸಮಿತಿಯನ್ನು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರು ಈಗ ಮರು ರಚಿಸಿದ್ದಾರೆ.

ಮೂಲ ಸಮಿತಿಯಲ್ಲಿದ್ದ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಅವರು ಮಾರ್ಚ್ 6 ರಂದು ನಿವೃತ್ತಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬದಲಿಗೆ ಬಾಂಬೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಪ್ರಸ್ತುತ ಸಮಿತಿಯ ಸದಸ್ಯರು:

ನ್ಯಾ. ಅರವಿಂದ್ ಕುಮಾರ್ (ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ)

ನ್ಯಾ. ಚಂದ್ರಶೇಖರ್ (ಬಾಂಬೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ)

ಬಿ.ವಿ. ಆಚಾರ್ಯ (ಹಿರಿಯ ವಕೀಲರು)

ತಮ್ಮ ವಿರುದ್ಧದ ಈ ಸಮಿತಿಯನ್ನು ರದ್ದುಗೊಳಿಸುವಂತೆ ನ್ಯಾ. ವರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗಷ್ಟೇ ವಜಾಗೊಳಿಸಿತ್ತು. ತಾವು ಮನೆಯಲ್ಲಿ ಇಲ್ಲದಿದ್ದಾಗ ಅಗ್ನಿ ಅವಘಡ ಸಂಭವಿಸಿದೆ ಮತ್ತು ಅಗ್ನಿಶಾಮಕ ದಳ ಯಾವುದೇ ಹಣ ವಶಪಡಿಸಿಕೊಂಡಿಲ್ಲ ಎಂದು ಅವರು ವಾದಿಸಿದ್ದರೂ, ನ್ಯಾಯಾಲಯ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಹಿಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರು ನಡೆಸಿದ್ದ ಆಂತರಿಕ ತನಿಖೆಯು ನ್ಯಾ. ವರ್ಮಾ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿತ್ತು. ಅವರು ರಾಜೀನಾಮೆ ನೀಡಲು ನಿರಾಕರಿಸಿದ ಕಾರಣ, ಪ್ರಕರಣವನ್ನು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗೆ ವರ್ಗಾಯಿಸಲಾಯಿತು.

ಸಂವಿಧಾನದ ಕಲಂ 124(4) ಮತ್ತು 218ರ ಅಡಿಯಲ್ಲಿ, ಸಂಸತ್ತಿನ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತ ದೊರೆತರೆ ಮಾತ್ರ ರಾಷ್ಟ್ರಪತಿಯವರು ನ್ಯಾಯಮೂರ್ತಿಗಳನ್ನು ಪದಚ್ಯುತಗೊಳಿಸಬಹುದು.

ಸದ್ಯ ನ್ಯಾ. ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗಾಯಿಸಲಾಗಿದ್ದು, ಅವರ ನ್ಯಾಯಾಂಗ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !