ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆ ಈಗ ಹೊಸ ತಿರುವು ಪಡೆದುಕೊಂಡಿದೆ. ಜಾರಿ ನಿರ್ದೇಶನಾಲಯದ ತನಿಖೆಯಿಂದ ತತ್ತರಿಸಿ ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದಿದ್ದ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಈಗ ಸಿಬಿಐ ಬಿಸಿ ಮುಟ್ಟಿಸಿದೆ. ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ನೀಡಿರುವುದು ನಾಗೇಂದ್ರ ಅವರಿಗೆ ಮತ್ತೆ ಬಂಧನದ ಭೀತಿ ತಂದೊಡ್ಡಿದೆ.
ಹಗರಣದ ಆರೋಪ ಕೇಳಿಬಂದ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಾಗೇಂದ್ರ, ಜೈಲು ವಾಸದ ನಂತರ ಬಿಡುಗಡೆಯಾಗಿ ರಾಜ್ಯ ಸಚಿವ ಸಂಪುಟ ಪುನಾರಚನೆ ವೇಳೆ ಮತ್ತೆ ಸ್ಥಾನ ಪಡೆಯುವ ಭರವಸೆಯಲ್ಲಿದ್ದರು. ಆದರೆ, ಸಿಬಿಐ ಈಗ ಹಗರಣದ ಆಳ-ಅಗಲವನ್ನು ಕೆದಕಲು ಮುಂದಾಗಿರುವುದು ಅವರ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ.
ಸಿಬಿಐನಿಂದ ಬಂಧನಕ್ಕೊಳಗಾಗುವ ಸಾಧ್ಯತೆ ದಟ್ಟವಾಗಿರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಬಿ. ನಾಗೇಂದ್ರ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

