ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ‘ವೋಕಲ್ ಫಾರ್ ಲೋಕಲ್’ ಹೆಸರಿನಲ್ಲಿ ಸ್ವದೇಶಿ ವಸ್ತುಗಳ ಖರೀದಿ ಮತ್ತು ಬಳಕೆಗೆ ಕರೆ ನೀಡಿದ್ದು, ಈ ಮೂಲಕ ಸ್ವಾವಲಂಬನೆ, ಸ್ಥಳೀಯ ಉದ್ಯಮಿಗಳು, ವ್ಯಾಪಾರಿಗಳು, ಉದ್ಯೋಗಿಗಳನ್ನು ಬಲಪಡಿಸಲು ಸಾಥ್ ನೀಡಲು ತಿಳಿಸಿದ್ದರು.
ವಿದೇಶಿ ಬ್ರ್ಯಾಂಡುಗಳ ಬದಲಿಗೆ ಸ್ಥಳೀಯ ಅಂಗಡಿಗಳ ವಸ್ತುಗಳ ಖರೀದಿ, ದೇಶದಲ್ಲಿಯೇ ನಿರ್ಮಾಣವಾದ ನಮ್ಮ ದೇಶದ ಬ್ರ್ಯಾಂಡುಗಳ ವಸ್ತುಗಳ ಖರೀದಿಗೆ ಆದ್ಯತೆ ನೀಡುವಂತೆ ಕರೆ ನೀಡಿದ್ದಾರೆ. ಮೋದಿ ಅವರ ಈ ಕರೆಗೆ ಇದೀಗ ಸಿನಿಮಾ ಸೆಲೆಬ್ರಿಟಿಗಳು ಬೆಂಬಲ ನೀಡಿದ್ದಾರೆ.
ಸ್ಥಳೀಯ ವ್ಯಾಪಾರಿಗಳೊಟ್ಟಿಗೆ ವಸ್ತುಗಳನ್ನು ಖರೀದಿಸಿ ಆ ವ್ಯಾಪಾರಿ ಜೊತೆಗೆ ಅಥವಾ ಕುಶಲಕರ್ಮಿ ಜೊತೆಗೆ ಅಥವಾ ದೇಸಿ ವಸ್ತುವಿನ ಜೊತೆಗೆ ಸೆಲ್ಫಿ ತೆಗೆದುಕೊಂಡು ಆ ಚಿತ್ರಗಳನ್ನು ನಮೋ ಆಪ್ನಲ್ಲಿ ಹಂಚಿಕೊಳ್ಳುವಂತೆ ಮೋದಿ ಅವರು ಮನವಿ ಮಾಡಿದ್ದಾರೆ. ಮೋದಿ ಅವರ ಈ ಇನಿಶಿಯೇಟಿವ್ ಅನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಸಿನಿಮಾ ಸೆಲೆಬ್ರಿಟಿಗಳು ಮಾಡುತ್ತಿದ್ದಾರೆ.
ತೃಪ್ತಿ ದಿಮ್ರಿ, ಮಾಧುರಿ ದೀಕ್ಷಿತ್, ರೂಪಾಲಿ ಗಂಗೂಲಿ, ಹಾಸ್ಯನಟ ಸುನಿಲ್ ಗ್ರೋವರ್, ಗಾಯಕ ಶಂಕರ್ ಮಹದೇವನ್ ಅವರುಗಳು ಮೋದಿ ಅವರ ಕರೆಯಂತೆ ಸ್ಥಳೀಯ ವ್ಯಾಪಾರಿಗಳಿಂದ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿದ್ದು, ವ್ಯಾಪಾರಿಯೊಟ್ಟಿಗೆ ಸೆಲ್ಫಿ ತೆಗೆದುಕೊಂಡು ಹಂಚಿಕೊಂಡಿದ್ದಾರೆ.
ಮಾಧುರಿ ದೀಕ್ಷಿತ್ ಅವರು ರಾಯಪುರದ ಸ್ಥಳೀಯ ಲೈಟುಗಳ ಅಂಗಡಿಗಳಿಂದ ದೀಪಾವಳಿಗೆ ಲೈಟುಗಳನ್ನು ಖರೀದಿ ಮಾಡಿದರೆ, ನಟಿ ತೃಪ್ತಿ ದಿಮ್ರಿ ಸ್ಥಳೀಯವಾಗಿ ಮಾಡಿದ ಸುಂದರವಾದ ಚಪ್ಪಲಿಗಳನ್ನು ಖರೀದಿ ಮಾಡಿದ್ದಾರೆ. ಸುನಿಲ್ ಗ್ರೋವರ್ ಲಖನೌನ ಶಾಪ್ ಒಂದರಿಂದ ಉಡುಗೊರೆ ಖರೀದಿ ಮಾಡಿದ್ದಾರೆ. ಶಂಕರ್ ಮಹದೇವನ್ ಅವರು ಪ್ರಯಾಗ್ರಾಜ್ನಲ್ಲಿ ಸಿಹಿ ಖರೀದಿ ಮಾಡಿದ್ದಾರೆ. ಎಲ್ಲರೂ ಆಹಾ ಕುಶಲಕರ್ಮಿಗಳು, ವ್ಯಾಪಾರಿಗಳೊಟ್ಟಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.
ಸಿನಿಮಾ ಸೆಲೆಬ್ರಿಟಿಗಳು ಇದೀಗ ಮೋದಿ ಅವರ ಕರೆಗೆ ಬೆಂಬಲ ನೀಡಿದ್ದು, ಮೋದಿ ಅವರ ಕನಸಿನ ಸ್ವಾವಲಂಬಿ ಉದ್ಯಮ, ಸ್ವದೇಶಿ ವಸ್ತುಗಳ ಖರೀದಿ ಮೂಲಕ ಆರ್ಥಿಕ ಬಲವೃದ್ಧಿ ಕಾರ್ಯಕ್ರಮಗಳಿಗೆ ತಮ್ಮ ಯೋಗದಾನವನ್ನೂ ನೀಡಿದ್ದಾರೆ.