ಹೊಸದಿಗಂತ ವರದಿ, ದಾವಣಗೆರೆ
ವಿರೋಧ, ಸವಾಲು, ಅಡೆ-ತಡೆಗಳ ನಡುವೆಯೂ ರಾಷ್ಟ್ರೀಯ ಸ್ವಯಂಸೇವಕ ಸಂಘವು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ನೂರು ವರ್ಷಗಳನ್ನು ಪೂರೈಸಿ, ಪುಟಕ್ಕಿಟ್ಟ ಚಿನ್ನದಂತೆ ದೇದೀಪ್ಯಮಾನವಾಗಿದೆ ಎಂದು ದೇವಸ್ಥಾನ ಸಂವರ್ಧನ ಸಮಿತಿ ರಾಜ್ಯ ಸಂಯೋಜಕ ಮನೋಹರ ಮಠದ್ ತಿಳಿಸಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಸಂಜೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷ ಹಾಗೂ ವಿಜಯದಶಮಿ ನಿಮಿತ್ತದ ಪಥಸಂಚಲನದ ನಂತರ ನಡೆದ ಬಹಿರಂಗ ಸಭೆಯಲ್ಲಿ ಮುಖ್ಯ ವಕ್ತಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತವನ್ನು ವಿಶ್ವವಂದ್ಯವಾಗಿಸುವ ನಿಟ್ಟಿನಲ್ಲಿ ಹಿಂದು ಸಮಾಜ ಸಂಘಟನೆಯಲ್ಲಿ ತೊಡಗಿರುವ ಸಂಘವನ್ನು ಮಟ್ಟಹಾಕಲು ಪ್ರಾರಂಭದಿಂದಲೂ ಪ್ರಯತ್ನಗಳಾಗುತ್ತಿವೆ. 1935ರಲ್ಲಿ ಢೋಂಗೀ ಜಾತ್ಯಾತೀತವಾದಿಗಳು ಬ್ರಿಟೀಶರ ಮೇಲೆ ಒತ್ತಡ ತಂದು ಸರ್ಕಾರಿ ನೌಕರಿಯಲ್ಲಿ ಕೆಲಸ ಮಾಡುವವರು ಸಂಘ-ಸಂಸ್ಥೆಯಲ್ಲಿ ಭಾಗವಹಿಸುವಂತಿಲ್ಲವೆಂಬ ಆದೇಶ ಹೊರಡಿಸಿದ್ದರು. 1966ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಅದೇ ಬ್ರಿಟೀಶ್ ಆದೇಶವನ್ನು ಪುನಃ ಜಾರಿಗೆ ತಂದಿದ್ದರು. ಆದರೆ 2024 ಜೂನ್ ತಿಂಗಳಲ್ಲಿ ದೇಶದ ನಿಷ್ಪಕ್ಷಪಾತ ಪ್ರಧಾನಿಯವರು ಸಂಘದಲ್ಲಿ ಪಾಲ್ಗೊಳ್ಳಲು ಇದ್ದ ಎಲ್ಲ ನಿರ್ಬಂಧ ತೆಗೆದುಹಾಕಿರುವುದಾಗಿ ಹೇಳಿದ್ದಾರೆ. ಹೀಗೆ ಸಂಘವು ಬೆಂಕಿಯಲ್ಲಿ ಸುಟ್ಟಷ್ಟೂ ಚಿನ್ನದಂತೆ ಪ್ರಖರವಾಗಿ ಪ್ರಕಟವಾಗಿದೆ. ವಿರೋಧ ಮಾಡಿದಷ್ಟೂ ಸಂಘ ಪುಟಿದೆದ್ದಿದೆ ಎಂದರು.
ಅನೇಕರು ಗಾಂಧಿ ಹತ್ಯೆಯೊಂದಿಗೆ ಸಂಘವನ್ನು ಬೆಸೆಯುವ ಆರೋಪ ಮಾಡುತ್ತಾರೆ. ಆದರೆ ಅದೇ ಗಾಂಧೀಜಿಯವರು ಸ್ವಾತಂತ್ರ್ಯಾನಂತರ 1947 ಸೆಪ್ಟಂಬರ್ 15ರಂದು 500 ಜನ ಸ್ವಯಂಸೇವಕರನ್ನು ಅಭಿನಂದಿಸಿ, ಸಂಘದ ಸಮಾಜ ಸಂಘಟನೆಯ ಕೆಲಸವನ್ನು ಕೊಂಡಾಡಿದ್ದರು ಎಂಬುದನ್ನು ಮರೆಯಬಾರದು. ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದಾಗ ಸ್ವಯಂಸೇವಕರು ನಿರಾಶ್ರಿತ ಹಿಂದುಗಳ ಯೋಗಕ್ಷೇಮಕ್ಕೆ ನಿಂತಿದ್ದರು. ಇದೆಲ್ಲವೂ ಚರ್ಚೆಯಾಗಲ್ಲ. ದೇಶ ಇಬ್ಭಾಗವಾದಾಗ ಕೆಲವರು ದೆಹಲಿ ಕೆಂಪುಕೋಟೆ ಮೇಲೆ ಧ್ವಜ ಹಾರಿಸುವ ಸಂಭ್ರಮದಲ್ಲಿದ್ದರೆ, ಅದೇ ದೆಹಲಿಯಲ್ಲಿ ನಿರಾಶ್ರಿತರಿಗೆ ಗಂಜಿ ಕೇಂದ್ರ, ಪುನರ್ವಸತಿ ಕಲ್ಪಿಸಿದ್ದು ಸಂಘವೇ ಹೊರತು ಯಾವುದೇ ರಾಜಕೀಯ ವ್ಯವಸ್ಥೆಯಲ್ಲ. ಗುರೂಜಿ ಗೋಲ್ವಾಲ್ಕರ್ ಸೂಚನೆಯಂತೆ ಹಿಂದುಗಳ ಸುರಕ್ಷತೆಗಾಗಿ ಆರೆಸ್ಸೆಸ್ಸಿನ ನೂರಾರು ಸ್ವಯಂಸೇವಕರು ಲಾಹೋರ್, ಕಂದಹಾರ್ ತೆರಳಿದ್ದರು. ಇಂತಹ ಸತ್ಯ ಸಂಗತಿಗಳ ಅನಾವರಣ ಆಗಬೇಕಿದೆ ಎಂದು ಅವರು ನುಡಿದರು.
ಆರೆಸ್ಸೆಸ್ ಮುಸಲ್ಮಾನರು, ಕ್ರಿಶ್ಚಿಯನ್ನರನ್ನು ವಿರೋಧಿಸುತ್ತದೆ ಅಂತಾ ಕೆಲವರು ಅಪಪ್ರಚಾರ ಮಾಡುತ್ತಾರೆ. ದೇಶದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ, ಕ್ರಿಶ್ಚಿಯನ್ ಇಲ್ಲದಿದ್ದರೂ ಸಂಘ ಬೆಳೆಯುತ್ತಿತ್ತು. ಹಿಂದು ಧರ್ಮ, ಸಂಸ್ಕೃತಿ, ಮಠ-ಮಂದಿರ, ಸನಾತನ ಮೌಲ್ಯಗಳಿಗಾಗಿ ಸಂಘ ಕೆಲಸ ಮಾಡುತ್ತಿದೆ. ಕೋವಿಡ್ ಕಾಲಘಟ್ಟದಲ್ಲಿ ಬಂಧುಗಳ ಹೆಣ ನೋಡಲೂ ಜನರು ಬಾರದ ಸಂದರ್ಭದಲ್ಲಿ ಸ್ವಯಂಸೇವಕರು ಜಾತಿ, ಮತ ನೋಡದೆ ಮುಸ್ಲಿಂ, ಕ್ರಿಶ್ಚಿಯನ್ನರ ನೂರಾರು ಶವಸಂಸ್ಕಾರ ಮಾಡಿದ್ದಾರೆ. ದೇಹದ ಯಾವುದೇ ಭಾಗಕ್ಕೆ ತೊಂದರೆಯಾದರೂ ವ್ಯಕ್ತಿಗೆ ನೋವಾಗುತ್ತದೆ. ಆದ್ದರಿಂದ ಜಾತಿ, ಪಕ್ಷ, ಭಾಷೆ ದೂರಗೊಳಿಸಿ, ನಾವೆಲ್ಲಾ ಒಂದು ಎಂಬ ಭಾವನೆ ಬೆಳೆಸಿಕೊಳ್ಳೋಣ ಎಂದು ಅವರು ಕರೆ ನೀಡಿದರು.
ಹಿಂದುತ್ವ ಎಂಬುದು ಸರ್ವೇ ಜನಾಃ ಸುಖಿನೋಭವಂತು, ಕೃಣ್ವಂತೋ ವಿಶ್ವಮಾರ್ಯಂ ಎಂಬ ಸಂದೇಶವುಳ್ಳ ಜೀವನ ಪದ್ಧತಿ. ಭಾರತ ಇರುವವರೆಗೆ ಜಗತ್ತು ಇರುತ್ತದೆ. ಭಾರತ ಚೆನ್ನಾಗಿರಲು ಹಿಂದೂರಾಷ್ಟ್ರ ಆಗಿರಬೇಕು, ಹಿಂದುತ್ವ ಉಳಿಯಬೇಕೆಂಬ ದೃಷ್ಟಿಯಲ್ಲಿ ಸಂಘ ಕೆಲಸ ಮಾಡುತ್ತಿದೆ. ಹಿಂದುತ್ವ ಇಲ್ಲದಿದ್ದರೆ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಸಮಾಜದಲ್ಲಿ ರಾಷ್ಟ್ರಪ್ರಜ್ಞೆ, ಸಜ್ಜನ ಶಕ್ತಿ ಬೆಳೆಸಲು ಸಂಘವು ಶತಾಬ್ದಿ ವರ್ಷದ ಪ್ರಯುಕ್ತ ಸ್ವದೇಶಿ ಚಿಂತನೆ, ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನೆ, ಪರಿಸರ ಸಂರಕ್ಷಣೆ, ನಾಗರೀಕ ಜವಾಬ್ದಾರಿ ಎಂಬ ಪಂಚ ಪರಿವರ್ತನೆಗಳನ್ನು ಕೈಗೆತ್ತಿಕೊಂಡಿದೆ ಎಂದು ಅವರು ವಿವರಿಸಿದರು.

ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಂಘಚಾಲಕ ಜಿ.ಎಸ್.ಉಮಾಪತಿ, ದಾವಣಗೆರೆ ನಗರ ಸಂಘಚಾಲಕ ಅಜಿತ್ ಓಸ್ವಾಲ್, ಪ್ರಮುಖರಾದ ಸುರೇಂದ್ರ ನಿಶಾನಿಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಸ್ತಿನ ಪಥಸಂಚಲನ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷ ಹಾಗೂ ವಿಜಯದಶಮಿ ನಿಮಿತ್ತ ನಗರದಲ್ಲಿ ಶನಿವಾರ ಸಂಜೆ ದಂಡ ಸಹಿತ ಗಣವೇಷದೊಂದಿಗೆ ಶಿಸ್ತಿನ ಪಥಸಂಚಲನ ಜರುಗಿತು. ಬಂಬೂ ಬಜಾರ್ ವಿಠಲ್ ಮಂದಿರ ಹಾಗೂ ಶ್ಯಾಬನೂರು ರಸ್ತೆಯ ಕಾಸಲ್ ವಿಠಲ್ ಶ್ರೇಷ್ಠಿ ಉದ್ಯಾನವನ ಹೀಗೆ ಎರಡು ಕಡೆಯಿಂದ ಆರಂಭಗೊಂಡ ಸ್ವಯಂಸೇವಕರ ಪಥಸಂಚಲನವು ಹೈಸ್ಕೂಲ್ ಮೈದಾನದಲ್ಲಿ ಸಮಾವೇಶಗೊಂಡಿತು. ಸಾವಿರಾರು ಸ್ವಯಂಸೇವಕರು ಶಿಸ್ತಿಯಿಂದ ಹೆಜ್ಜೆ ಹಾಕುತ್ತಿದ್ದುದನ್ನು ನಾಗರೀಕರು ಕಣ್ತುಂಬಿಕೊಂಡು ಪ್ರೇರಣೆ ಪಡೆದರು. ಅನೇಕ ಕಡೆ ಪಥಸಂಚಲನ ನಡೆಯುವ ಮಾರ್ಗದಲ್ಲಿ ರಂಗೋಲಿ, ಹೂವು, ಜಲಪ್ರೋಕ್ಷಣೆ ಮಾಡಿ ಸ್ವಯಂಸೇವಕರನ್ನು ಸ್ವಾಗತಿಸಲಾಯಿತು.