ಹೊಸ ದಿಗಂತ ವರದಿ,ಮಂಡ್ಯ:
ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷ ಪೂರೈಸಿದ ಹಾಗೂ ವಿಜಯದಶಮಿ ಅಂಗವಾಗಿ ನಗರದಲ್ಲಿ ಆರ್.ಎಸ್.ಎಸ್. ಸ್ವಯಂ ಸೇವಕರಿಂದ ಆಕರ್ಷಕ ಪಥ ಸಂಚಲನ ಯಶಸ್ವಿಯಾಗಿ ನಡೆಯಿತು.
ನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬಳಿ ಸಮಾವೇಶಗೊಂಡ ಗಣವೇಷಧಾರಿಗಳು ಸ್ಥಳದಲ್ಲಿ ಧ್ವಜವಂದನೆ ಬಳಿಕ ಪಥ ಸಂಚಲನ ಆರಂಭಿಸಿದರು. ಸರತಿ ಸಾಲಿನಲ್ಲಿ ನಿಂತ ಶಿಸ್ತಿನ ಸಿಫಾಯಿಗಳಂತೆ ಪಥ ಸಂಚಲನದಲ್ಲಿ ಸಾಗಿದರು.
ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬಳಿಯಿಂದ ಪ್ರಾರಂಭವಾದ ಪಥ ಸಂಚಲನ ವಿನೋಭ ರಸ್ತೆ, ಮೈಸೂರು ಬೆಂಗಳೂರು ಹೆದ್ದಾರಿ, ಜೆ.ಸಿ. ವೃತ್ತ, ಮಹಾವೀರ ವೃತ್ತ, ವಿಶ್ವೇಶ್ವರಯ್ಯ ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆ ಮಾರ್ಗವಾಗಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಬಳಿ ತಲುಪಿ ಸಂಪನ್ನಗೊಂಡಿತು.
ಗಣವೇಷಧಾರಿಗಳು ಶಿಸ್ತಿನ ಶಿಪಾಯಿಗಳಂತೆ ರಸ್ತೆಯಲ್ಲಿ ಸಾಗುತ್ತಿದ್ದರೆ, ನಾಗರೀಕರು ಮಹಡಿಗಳ ಮೇಲಿನಿಂದ ತಮ್ಮ ಮನೆ ಬಳಿ ನಿಂತು ಪುಷ್ಪವೃಷ್ಠಿ ಮಾಡುವ ಮೂಲಕ ವಂದನೆ ಸಲ್ಲಿಸುತ್ತಿದ್ದುದು ಕಂಡುಬಂತು.
ಕೆಲವು ಕಡೆಗಳಲ್ಲಿ ರಸ್ತೆಯುದ್ದಕ್ಕೂ ಜನಸಾಮಾನ್ಯರು, ಅಂಗಡಿ ಮುಂಗಟ್ಟುಗಳ ಮಾಲೀಕರು ಸಿಬ್ಬಂದಿಗಳು ಪುಷ್ಪಾರ್ಚನೆ ಮಾಡಿದರೆ, ನಗರದ ಶ್ರೀ ವಿದ್ಯಾಗಣಪತಿ ದೇವಾಲಯದ ಬಳಿ ಮಹಿಳಾ ಮಂಡಳಿ ಕಾರ‌್ಯಕರ್ತರು ಭಾರತದ ಮಾತೆಯ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಿದ್ದರು. ಗಣವೇಷಧಾರಿಗಳು ಈ ಮಾರ್ಗದಲ್ಲಿ ಬರುತ್ತಿದ್ದಂತೆ ಅವರ ಮೇಲೆ ಪುಷ್ಪಾರ್ಚನೆ ಮಾಡಿದರಲ್ಲದೆ, ಭಾರತ್ ಮಾತಾಕೀ ಜೈ ಎಂಬ ಘೋಷಣೆಗಳನ್ನು ಮೊಳಗಿಸಿದರು.