ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಏಷ್ಯಾದ ಸಂಘರ್ಷವು ಭಾರತದ ಅಡುಗೆಮನೆಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ತೈಲ ಮತ್ತು ಅನಿಲ ಆಮದಿನಲ್ಲಿ ವ್ಯತ್ಯಯ ಉಂಟಾಗಿದೆ.
ಇದರ ಬೆನ್ನಲ್ಲೇ ಸಂಭಾವ್ಯ ಇಂಧನ ಪೂರೈಕೆ ಅಡಚಣೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಮಾರ್ಚ್ 2026 ರಿಂದ ಜಾರಿಗೆ ಬರುವಂತೆ ಅಗತ್ಯ ಸರಕುಗಳ ಕಾಯ್ದೆ 1955 ಅನ್ನು ಜಾರಿಗೆ ತಂದಿದೆ.
ಜನರಿಗೆ ಯಾವುದೇ ಅಡೆತಡೆಯಿಲ್ಲದೆ ಅಡುಗೆ ಅನಿಲ ತಲುಪಬೇಕು ಎಂಬ ಉದ್ದೇಶದಿಂದ ಸರ್ಕಾರವು ಈಗ ಪೂರೈಕೆ ಮತ್ತು ವಿತರಣೆಯ ಸಂಪೂರ್ಣ ನಿಯಂತ್ರಣವನ್ನು ತನ್ನ ಕೈಗೆತ್ತಿಕೊಂಡಿದೆ. ದೇಶೀಯ ಮತ್ತು ನಿರ್ಣಾಯಕ ವಲಯಗಳಿಗೆ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಮತ್ತು ನೈಸರ್ಗಿಕ ಅನಿಲದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅವುಗಳ ಉತ್ಪಾದನೆ ಮತ್ತು ವಿತರಣೆಯನ್ನು ನಿಯಂತ್ರಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ನಿರ್ದಿಷ್ಟ ನಿರ್ದೇಶನಗಳನ್ನು ಹೊರಡಿಸಿದೆ.
ಅಗತ್ಯ ಸರಕುಗಳ ಕಾಯ್ದೆ 1955 ಎಂಬುದು ಗ್ರಾಹಕರಿಗೆ ಅಗತ್ಯ ವಸ್ತುಗಳು ನ್ಯಾಯಯುತ ಬೆಲೆಯಲ್ಲಿ ಮತ್ತು ಸುಲಭವಾಗಿ ಸಿಗುವಂತೆ ಮಾಡಲು ಭಾರತ ಸರ್ಕಾರ ರೂಪಿಸಿರುವ ಒಂದು ಪ್ರಮುಖ ಕಾನೂನಾಗಿದೆ.
ದೇಶದಲ್ಲಿ ಯಾವುದಾದರೂ ವಸ್ತುವಿನ ಕೊರತೆ ಉಂಟಾದಾಗ ಅಥವಾ ಬೆಲೆ ವಿಪರೀತ ಏರಿಕೆಯಾದಾಗ, ಅದರ ಉತ್ಪಾದನೆ, ಪೂರೈಕೆ ಮತ್ತು ವಿತರಣೆಯನ್ನು ನಿಯಂತ್ರಿಸುವ ಅಧಿಕಾರವನ್ನು ಈ ಕಾಯ್ದೆ ಸರ್ಕಾರಕ್ಕೆ ನೀಡುತ್ತದೆ.
ಈ ಕಾಯ್ದೆಯಡಿ ಅಧಿಕಾರಿಗಳು ಅಗತ್ಯ ವಸ್ತುಗಳ ದಾಸ್ತಾನು ಮಿತಿಯನ್ನು ನಿಗದಿಪಡಿಸಬಹುದು ಮತ್ತು ಅಕ್ರಮ ದಾಸ್ತಾನು ತಡೆಯಲು ಕ್ರಮ ಕೈಗೊಳ್ಳಬಹುದು. ಪ್ರಸ್ತುತ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಅಡುಗೆ ಅನಿಲದ ಬೆಲೆ ಏರಿಕೆಯಾಗದಂತೆ ತಡೆಯುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.
ಅಗತ್ಯ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸಲು ಇದು ಅಗತ್ಯ.
ಪೆಟ್ರೋಲಿಯಂ ಉತ್ಪನ್ನಗಳು (LPG, ಪೆಟ್ರೋಲ್), ಆಹಾರ ಪದಾರ್ಥಗಳು (ಬೇಳೆಕಾಳುಗಳು, ಎಣ್ಣೆ), ರಸಗೊಬ್ಬರಗಳು ಮತ್ತು ಔಷಧಗಳು ಬರುತ್ತವೆ. ಸಂದರ್ಭಕ್ಕೆ ತಕ್ಕಂತೆ ಹೊಸ ವಸ್ತುಗಳನ್ನು ಈ ಪಟ್ಟಿಗೆ ಸೇರಿಸುವ ಅಥವಾ ತೆಗೆಯುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ.
ಈ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುವವರಿಗೆ 7 ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.



