ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಎಐ ಡೀಪ್‌ಫೇಕ್ ವಿರುದ್ಧ ಕಠಿಣ ಕ್ರಮಕ್ಕೆಕೇಂದ್ರ ಸರ್ಕಾರ ಕಾನೂನಿನ ಪರಿಹಾರವನ್ನು ಹುಡುಕಿದೆ. ಕೃತಕ ಬುದ್ಧಿಮತ್ತೆ ಅಂದ್ರೇ ಎಐ ಆಧಾರಿತ ಡೀಪ್‌ಫೇಕ್ ಎಂಬ ಮಾಯಾಜಾಲಕ್ಕೆ ಮೋದಿ ಸರ್ಕಾರ ಅಂಕುಶ ಹಾಕುತ್ತಿದೆ. ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುವ ಫೇಕ್ ಮತ್ತು ತಿರುಚಿದ ಮಾಹಿತಿಗೆ ಬ್ರೇಕ್ ಹಾಕಲು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ದೇಶದ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಕ್ರಾಂತಿಕಾರಕ ತಿದ್ದುಪಡಿಗಳನ್ನು ತರಲು ಮುಂದಾಗಿದೆ. ಈ ಹೊಸ ನಿಯಮಗಳಿಂದ ಗೂಗಲ್, ಮೆಟಾ, ಎಕ್ಸ್ ಕಂಪನಿಗಳಿಗೆ ಸಂಕಷ್ಟ ಶುರುವಾಗಲಿದೆ.
ಹೊಸ ರೂಲ್ಸ್ ಜಾರಿಯಾದರೆ, ಇನ್ಮುಂದೆ ಎಐ ಬಳಸಿ ಸೃಷ್ಟಿಸಿದ ಪ್ರತಿಯೊಂದು ಕಂಟೆಂಟ್‌ಗೂ ಒಂದು ಲೇಬಲ್ ಇರಲೇಬೇಕು. ತಪ್ಪಿದ್ರೆ.. ಕಾನೂನು ಹೋರಾಟಕ್ಕೆ ಸಿದ್ಧವಾಗಬೇಕಿದೆ.
2021ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳಿಗೆ ತಿದ್ದುಪಡಿ ತರಲು ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮುಂದಾಗಿದೆ. ಕೃತಕವಾಗಿ ಅಥವಾ ಅಲ್ಗಾರಿದಮ್ ಬಳಸಿ ಸೃಷ್ಟಿಸಲಾದ ಸಿಂಥೆಟಿಕ್ ಇನ್ಫರ್ಮೆಷನ್ ಅನ್ನು ಅಂದ್ರೆ ಡೀಪ್‌ಫೇಕ್ ಮತ್ತು ಇತರೆ ಎಐ-ರಚಿತ ಕಂಟೆಂಟ್‌ಗಳನ್ನು ನಿಯಂತ್ರಿಸುವುದೇ ಇದರ ಗುರಿಆಗಿದೆ. ಇದಕ್ಕಾಗಿ ಈಗಾಗಲೇ ಕರಡು ನಿಯಮಗಳನ್ನು ಕೂಡ ಕೇಂದ್ರ ಸರ್ಕಾರ ಪ್ರಕಟಿಸಿದ್ದು, ಎಐ ದುರ್ಬಳಕೆಗೆ ಬ್ರೇಕ್ ಹಾಕಲು ಮುಂದಾಗಿದೆ. ಈ ಕರಡು ತಿದ್ದುಪಡಿಗಳ ಕುರಿತು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಸಲ್ಲಿಸಲು ಸಾರ್ವಜನಿಕರು ಮತ್ತು ಸಂಬಂಧಪಟ್ಟವರಿಗೆ ನವೆಂಬರ್ 6 ರವರೆಗೆ ಅವಕಾಶವನ್ನು ನೀಡಲಾಗಿದೆ.
ಏನಿದು ಸಿಂಥೆಟಿಕ್ ಮಾಹಿತಿ?
ಕರಡು ತಿದ್ದುಪಡಿಯಲ್ಲಿ ಮೊದಲ ಬಾರಿಗೆ ಸಿಂಥೆಟಿಕ್ ಆಗಿ ರಚಿಸಲಾದ ಮಾಹಿತಿ ಎಂಬುದಕ್ಕೆ ಸ್ಪಷ್ಟವಾದ ವ್ಯಾಖ್ಯಾನವನ್ನು ಕೇಂದ್ರ ಸರ್ಕಾರ ನೀಡಿದೆ. ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿ ಕೃತಕವಾಗಿ ಅಥವಾ ಅಲ್ಗಾರಿದಮ್ ಮೂಲಕ ರಚಿಸಿದ, ಬದಲಾಯಿಸಿದ ಅಥವಾ ತಿರುಚಿದ ಯಾವುದೇ ಮಾಹಿತಿಯು ನೋಡಲು ರಿಯಲ್ ಎಂದು ನಿಮಗೆ ಅನಿಸಿದರೆ, ಅದನ್ನು ಸಿಂಥೆಟಿಕ್ ಇನ್ಫರ್ಮೇಷನ್ ಎಂದು ಪರಿಗಣಿಸಲಾಗುತ್ತದೆ. ಈ ಡೆಫಿನಿಷನ್ ಅನ್ನು ಇಲ್ಲಿಗಲ್ ಇನ್ಫರ್ಮೇಷನ್‌ಗೆ ಸಂಬಂಧಿಸಿದಂತೆ ಇರುವ ನಿಯಮಗಳಲ್ಲಿ ಸೇರಿಸಲಾಗಿದೆ. ಇನ್ಮುಂದೆ ಡೀಪ್‌ಫೇಕ್‌ಗಳು ಹಾಗೂ ಸಿಂಥೆಟಿಕ್ ಇನ್ಫರ್ಮೇಷನ್ ಕೂಡ ಇತರೇ ಹಾನಿಕಾರಕ ಕಂಟೆಂಟ್‌ಗಳಂತೆಯೇ ಶಿಕ್ಷೆಗೆ ಅರ್ಹವಾಗಲಿವೆ. ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳುವಂತೆ, ಈ ನಿಯಮಗಳು ಬಳಕೆದಾರರು, ಕಂಪನಿಗಳು ಮತ್ತು ಸರ್ಕಾರದ ಹೊಣೆಗಾರಿಕೆಯನ್ನು ಹೆಚ್ಚಿಸಲಿವೆ.
ಇನ್ನು, ಈ ನಿಯಮಗಳ ಪ್ರಮುಖ ಅಂಶವೆಂದರೆ, ಸಿಂಥೆಟಿಕ್ ಕಂಟೆಂಟ್‌ಗಳನ್ನು ರಚಿಸಲು ಅಥವಾ ಮಾರ್ಪಡಿಸಲು ಅನುವು ಮಾಡಿಕೊಡುವ ಸೋಶಿಯಲ್ ಮೀಡಿಯಾ ಕಂಪನಿಗಳು ಅಥವಾ ವೇದಿಕೆಗಳು ಅಂತಹ ಕಂಟೆಂಟ್‌ಗೆ ಸ್ಪಷ್ಟವಾಗಿ ಲೇಬಲ್ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಲೇಬಲ್ ಅಥವಾ ವಿಶಿಷ್ಟ ಮೆಟಾಡೇಟಾ, ವಿಡಿಯೋ ಅಥವಾ ಇಮೇಜ್‌ನ ಕನಿಷ್ಠ ಶೇ.10ರಷ್ಟು ಪ್ರದೇಶವನ್ನು ಆವರಿಸಿರಬೇಕು. ಇದು ಇಮೇಜ್ ಕಥೆಯಾದ್ರೆ ಆಡಿಯೋ ಕ್ಲಿಪ್‌ನಲ್ಲಿ ಅದರ ಆರಂಭಿಕ ಶೇ.10ರಷ್ಟು ಅವಧಿಯವರೆಗೆ ಈ ಲೇಬಲ್ ಇರಲೇಬೇಕು. ಈ ಲೇಬಲ್ ಅನ್ನು ಶಾಶ್ವತವಾಗಿ ಕಂಟೆಂಟ್‌ನಲ್ಲಿ ಅಳವಡಿಸಬೇಕು ಮತ್ತು ಅದನ್ನು ತೆಗೆದುಹಾಕಲು ಅಥವಾ ಬದಲಾಯಿಸಲು ಯಾರಿಗೂ ಅವಕಾಶವಿರಬಾರದು ಎಂಬ ನಿಯಮವನ್ನು ಕೇಂದ್ರ ಸರ್ಕಾರ ಸೇರಿಸಿದೆ. ಇದರಿಂದ ಇನ್ಮೇಲೆ ಎಐ ಕಂಟೆಂಟ್ ಮೇಲೆ ಎಐ ಅಥವಾ ಸಿಂಥೇಟಿಕ್ ಕಂಟೆಂಟ್ ಲೇಬಲ್ ಬರುವುದು ಪಕ್ಕಾ ಆಗಿದೆ.
ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ಸರ್ಕಾರ ಎಐ ಕಂಟೆಂಟ್‌ಗೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ವಿಧಿಸಿದೆ. ಬಳಕೆದಾರರು ಯಾವುದೇ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡುವಾಗ, ಅದು ಸಿಂಥೆಟಿಕ್ ಹೌದೋ ಅಥವಾ ಅಲ್ಲವೋ ಎಂದು ಘೋಷಿಸುವುದನ್ನು ಕಡ್ಡಾಯ ಮಾಡಬೇಕು. ಯೂಸರ್ಸ್ ಕಂಟೆಂಟ್ ಅಪ್‌ಲೋಡ್ ಮಾಡುವಾಗ ಮಾಡುವ ಘೋಷಣೆಯನ್ನು ಪರಿಶೀಲಿಸಲು ಆಟೋಮೆಟೆಡ್ ಟೂಲ್ಸ್ ಅನ್ನು ಕಂಪನಿಗಳು ಬಳಸಬೇಕು. ಈ ನಿಯಮಗಳನ್ನು ಪಾಲಿಸಲು ಏನಾದ್ರೂ ಕಂಪನಿಗಳು ವಿಫಲವಾದರೆ, ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 79(2) ಅಡಿಯಲ್ಲಿ ಸಿಗುವ ಸೇಫ್ ಹಾರ್ಬರ್ ಅಂದ್ರೇ ಕಾನೂನಿನ ರಕ್ಷಣೆಯನ್ನು ಕಂಪನಿಗಳು ಕಳೆದುಕೊಳ್ಳಲಿವೆ. ಅಂದರೆ, ಬಳಕೆದಾರರು ಹಾಕುವ ತಪ್ಪು ಕಂಟೆಂಟ್‌ಗೆ ಕಂಪನಿಗಳೇ ನೇರ ಹೊಣೆಯಾಗಬೇಕಾಗುತ್ತದೆ. ಇಲ್ಲಿಯವರೆಗೂ ಬಳಕೆದಾರರು ಹಾಕುವ ಕಂಟೆಂಟ್‌ಗಳಿಗೆ ವೇದಿಕೆಗಳು ಜವಾಬ್ದಾರಿಯಾಗಿದ್ದಿಲ್ಲ. ಇನ್ಮುಂದೆ ಇದು ಬದಲಾಗಲಿದೆ. ಈಗಾಗಲೇ ಯೂಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಆಯ್ಕೆ ಲಭ್ಯವಿದ್ದು, ಅಪ್‌ಲೋಡ್ ಮಾಡುವಾಗ ಎಐ ಕಂಟೆಂಟ್ ಹೌದೋ, ಅಲ್ಲವೋ ಎಂಬುದನ್ನು ಘೋಷಿಸಬೇಕಿದೆ.
ಇತ್ತೀಚೆಗೆ ನಟಿ ಐಶ್ವರ್ಯಾ ರೈ ಬಚ್ಚನ್, ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ಎಐ ಕಂಟೆಂಟ್‌ಗೆ ಸಂಬಂಧಿಸಿದಂತೆ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಇದರ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದರು.
ಭಾರತ ಮಾತ್ರವಲ್ಲ ಜಗತ್ತಿನ ಹಲವೆಡೆ ರೂಲ್ಸ್!
ಕೇವಲ ಭಾರತ ಮಾತ್ರವಲ್ಲ.. ಈಗಾಗಲೇ ಜಗತ್ತಿನ ಅನೇಕ ಕಡೆ ಎಐ ಹಾಗೂ ಡೀಪ್‌ಫೇಕ್‌ಗೆ ನಿಯಂತ್ರಣ ಹಾಕಲು ಕಾನೂನು ಬಂದಿದೆ. ಪ್ರಮುಖವಾಗಿ ಯೂರೋಪಿಯನ್ ಯೂನಿಯನ್ ಆಗಸ್ಟ್ 2024ರಲ್ಲಿಯೇ ಎಐ ಕಾಯ್ದೆಯನ್ನು ಜಾರಿಗೆ ತಂದಿದೆ. ಎಐ ಸಿಸ್ಟಮ್‌ಗಳನ್ನು ಅವುಗಳ ರಿಸ್ಕ್‌ಗಳ ಆಧಾರದ ಮೇಲೆ ನಾಲ್ಕು ವಿಧಗಳಾಗಿ ವರ್ಗೀಕರಿಸಲಾಗಿದ್ದು, ಹಂತ ಹಂತವಾಗಿ ನಿರ್ಬಂಧವನ್ನು ಹೇರಲಾಗಿದೆ.

