ಹೊಸದಿಗಂತ ವರದಿ, ಚಿತ್ರದುರ್ಗ:
ಕರ್ನಾಟಕ ಹಾಗೂ ನನ್ನ ಲೋಕಸಭಾ ಕ್ಷೇತ್ರವಾದ ಚಿತ್ರದುರ್ಗ ಜಿಲ್ಲೆಯಲ್ಲಿ ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚಲು, ತಡೆಗಟ್ಟಲು ಹಾಗೂ ಚಿಕಿತ್ಸೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದಿಂದ ಬಿಡಗಡೆ ಮಾಡಿರುವ ಅನುದಾನದ ವಿವರಗಳು ಮತ್ತು ಕೈಗೊಂಡಿರುವ ಕ್ರಮಗಳ ಕುರಿತು ನಾನು ಲೋಕಸಭೆಯಲ್ಲಿ ಕೇಳಿದ ಚುಕ್ಕೆ ರಹಿತ ಪ್ರಶ್ನೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಜಗತ್‌ಪ್ರಕಾಶ್ ನಡ್ಡಾ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ಉತ್ತರದಲ್ಲಿ ಕರ್ನಾಟಕ ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಕ್ಯಾನ್ಸರ್ ರೋಗ ತಪಾಸಣೆ ಮತ್ತು ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರೀಯ ಅಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮ (ಓP-ಓಅಆ) ಅಡಿಯಲ್ಲಿ ೩೦ ವರ್ಷ ಮೇಲ್ಪಟ್ಟ ನಾಗರಿಕರಿಗೆ ಬಾಯಿ, ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ರೋಗಗಳ ತಪಾಸಣೆಯನ್ನು ವ್ಯಾಪಕವಾಗಿ ನಡೆಸಲಾಗಿದೆ. ಜಿಲ್ಲಾವಾರು ಅಂಕಿ ಅಂಶಗಳು ತಪಾಸಣೆ ಪ್ರಮಾಣವು ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಹೆಚ್ಚುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತವೆ.
ಇದಲ್ಲದೇ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಕ್ಯಾನ್ಸರ್ ರೋಗ ತಪಾಸಣೆ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಇದರಿಂದ ಕ್ಯಾನ್ಸರ್‌ರೋಗವನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗಿದ್ದು, ಯಶಸ್ವಿ ಚಿಕಿತ್ಸೆಗೆ ಇದು ಅತ್ಯಂತ ಪ್ರಮುಖವಾಗಿದೆ.
ಕ್ಯಾನ್ಸರ್ ರೋಗ ಚಿಕಿತ್ಸೆ ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಪ್ರಮುಖ ಕ್ರಮಗಳು: ದೇಶಾದ್ಯಂತ ೭೭೦ ಜಿಲ್ಲಾ ಎನ್‌ಸಿಡಿ ಕ್ಲಿನಿಕ್‌ಗಳ ಸ್ಥಾಪನೆ, ೩೬೪ ಜಿಲ್ಲಾ ಡೇಕೇರ್ ಕ್ಯಾನ್ಸರ್ ರೋಗ ಕೇಂದ್ರಗಳ ಕಾರ್ಯಾರಂಭ, ೨೦೨೫-೨೬ನೇ ಸಾಲಿಗೆ ೨೯೭ ಹೊಸ ಡೇಕೇರ್ ಕ್ಯಾನ್ಸರ್ ರೋಗ ಕೇಂದ್ರಗಳಿಗೆ ಅನುಮೋದನೆ, ಕರ್ನಾಟಕ ರಾಜ್ಯದಲ್ಲಿ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ರಾಜ್ಯ ಮಟ್ಟದ ಕ್ಯಾನ್ಸರ್ ರೋಗ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ತೃತೀಯ ಹಂತದ ಕ್ಯಾನ್ಸರ್ ರೋಗ ಕೇಂದ್ರವಾಗಿದೆ. ಜೊತೆಗೆ ೧೬ ಜಿಲ್ಲಾ ಡೇಕೇರ್ ಕ್ಯಾನ್ಸರ್ ರೋಗ ಕೇಂದ್ರಗಳಿಗೆ ಅನುಮೋದನೆ ನೀಡಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಎನ್‌ಸಿಡಿ ಕ್ಲಿನಿಕ್ ಹಾಗೂ ಡೇಕೇರ್ ಕ್ಯಾನ್ಸರ್ ರೋಗ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿಯೇ ಫಾಲೋ-ಅಪ್ ಕಿಮೋಥೆರಪಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದುವರೆಗೆ ೨೩ ರೋಗಿಗಳಿಗೆ ೬೮ ಕಿಮೋಥೆರಪಿ ಸೈಕಲ್‌ಗಳನ್ನು ಯಶಸ್ವಿಯಾಗಿ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಇದರಿಂದ ಗ್ರಾಮೀಣ ಪ್ರದೇಶದ ರೋಗಿಗಳು ದೂರದ ನಗರಗಳಿಗೆ ತೆರಳುವ ತೊಂದರೆಯಿಂದ ಮುಕ್ತರಾಗಿದ್ದಾರೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಆಂಕಾಲಜಿಸ್ಟ್‌ಗಳ ಕೊರತೆ ಇರುವುದನ್ನು ಗಮನಿಸಿ, ಈ ಸಮಸ್ಯೆ ನಿವಾರಣೆ ತೃತೀಯ ಹಂತದ ಆಸ್ಪತ್ರೆಗಳೊಂದಿಗೆ ಒಪ್ಪಂದಗಳನ್ನು (ಒoU) ಮಾಡಿಕೊಂಡು, ಜಿಲ್ಲಾ ಮಟ್ಟದಲ್ಲೇ ಚಿಕಿತ್ಸೆ ಮುಂದುವರೆಸಲು ಅವಕಾಶ ಕಲ್ಪಿಸಲಾಗಿದೆ. ಓP-ಓಅಆ ಯೋಜನೆಯಡಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಗಮನಾರ್ಹ ಪ್ರಮಾಣದ ಅನುದಾನವನ್ನು ಕೇಂದ್ರ ಸರ್ಕಾರ ಒದಗಿಸಿದೆ.
ಚಿತ್ರದುರ್ಗ ಜಿಲ್ಲೆಗೆ ಪ್ರತ್ಯೇಕವಾಗಿ ಅನುದಾನ ಹಂಚಿಕೆ ಹಾಗೂ ಅದರ ಪರಿಣಾಮಕಾರಿ ಬಳಕೆ ಮಾಡಲಾಗಿದೆ ಎಂಬುದು ಸರ್ಕಾರದ ಬದ್ಧತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಇದರ ಜೊತೆಗೆ ಕರ್ನಾಟಕ ಸರ್ಕಾರದ ’ಗೃಹ ಆರೋಗ್ಯ’ ಯೋಜನೆಯ ಮೂಲಕ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಅನುಮಾನಿತ ಪ್ರಕರಣಗಳನ್ನು ಆಯುಷ್ಮಾನ್ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರವಾನಿಸಲಾಗುತ್ತಿದೆ.
ಇದರಿಂದ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲೂ ಕ್ಯಾನ್ಸರ್ ರೋಗವನ್ನು ಮುಂಚಿತವಾಗಿಯೇ ಪತ್ತೆ ಹಚ್ಚಲು ಸಾಧ್ಯವಾಗಿದೆ.
ಕ್ಯಾನ್ಸರ್ ರೋಗ ಚಿಕಿತ್ಸೆಯು ಸ್ಥಳ, ಆರ್ಥಿಕ ಸ್ಥಿತಿ ಅಥವಾ ಗ್ರಾಮ-ನಗರ ಭೇದವಿಲ್ಲದೆ ಎಲ್ಲರಿಗೂ ಲಭ್ಯವಾಗಬೇಕು ಎಂಬುದೇ ಕೇಂದ್ರ ಸರ್ಕಾರದ ಸ್ಪಷ್ಟ ಗುರಿಯಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ .



