Friday, January 2, 2026

ಸೆಂಟ್ರಲ್ ಜೈಲೋ ಅಥವಾ ರೆಸಾರ್ಟೋ? ಬಿಂದಾಸ್ ಲೈಫ್ ನಡೆಸುತ್ತಿದ್ದ ಕೈದಿಗಳಿಗೆ ಇಲಾಖೆ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಲಬುರಗಿ ಕೇಂದ್ರ ಕಾರಾಗೃಹವು ಈಗ ಕೈದಿಗಳ ಮೋಜು-ಮಸ್ತಿಯ ತಾಣವಾಗಿ ಬದಲಾಗಿದೆಯೇ ಎಂಬ ಅನುಮಾನ ಮೂಡಿಸುತ್ತಿದೆ. ಜೈಲಿನೊಳಗೆ ಕೈದಿಗಳು ಅತ್ಯಂತ ಆರಾಮದಾಯಕ ಜೀವನ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಜೈಲಿನ ಆವರಣದಲ್ಲಿ ಆಕಾಶ್, ರಾಕೇಶ್, ಪ್ರಜ್ವಲ್ ಸೇರಿದಂತೆ ನಾಲ್ವರು ಕೈದಿಗಳು ರಾಜಾರೋಷವಾಗಿ ಇಸ್ಪೀಟ್ ಆಡುತ್ತಿರುವ ಮತ್ತು ಸಿಗರೇಟ್ ಸೇದುತ್ತಾ ಮೋಜು ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಕಾರಾಗೃಹದ ನಿಯಮಗಳನ್ನು ಗಾಳಿಗೆ ತೂರಿ ಕೈದಿಗಳು ನಡೆಸುತ್ತಿದ್ದ ಈ ಬಿಂದಾಸ್ ಲೈಫ್ ಅನ್ನು ಗಂಭೀರವಾಗಿ ಪರಿಗಣಿಸಿದ ಜೈಲು ಅಧೀಕ್ಷಕಿ ಅನೀತಾ ಫರ್ತಾಬಾದ್, ನಾಲ್ವರು ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಈ ಪ್ರಕರಣವು ಕಾರಾಗೃಹ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದು, ಇಲಾಖೆಯ ಹೆಚ್ಚುವರಿ ಮಹಾನೀರಿಕ್ಷಕ ಆನಂದ್ ರೆಡ್ಡಿ ಅವರು ಬೆಂಗಳೂರಿನಿಂದ ಕಲಬುರಗಿಗೆ ಆಗಮಿಸಿ ನೇರವಾಗಿ ತನಿಖೆ ಆರಂಭಿಸಿದ್ದಾರೆ. ಜೈಲಿನೊಳಗೆ ನಿಷೇಧಿತ ವಸ್ತುಗಳು ಹಾಗೂ ಮೊಬೈಲ್ ಫೋನ್‌ಗಳು ಹೇಗೆ ಸರಬರಾಜಾದವು ಎಂಬ ಬಗ್ಗೆ ಅವರು ಮಾಹಿತಿ ಕಲೆಹಾಕುತ್ತಿದ್ದಾರೆ.

ಪ್ರಕರಣದ ಗಂಭೀರತೆಯನ್ನು ಅರಿತು, ಜನವರಿ 3 ರಂದು ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಕಲಬುರಗಿ ಜೈಲಿಗೆ ಖುದ್ದಾಗಿ ಭೇಟಿ ನೀಡಲಿದ್ದಾರೆ. ಈ ಭೇಟಿಯ ವೇಳೆ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

error: Content is protected !!