ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಜನತೆಗೆ Next Gen GST ಕೊಡುಗೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ, ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭ ರಾಜ್ಯಗಳ ಅಭಿವೃದ್ಧಿಗೆ ಸಹಾಯವಾಗುವಂತೆ ಹೆಚ್ಚುವರಿ ತೆರಿಗೆ ಹಂಚಿಕೆ ಬಿಡುಗಡೆ ಮಾಡಿದೆ.
ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದು, ಪ್ರಧಾನಿಯಾಗಿ ಮೋದಿ ಅವರ ಆದೇಶದಂತೆ, 28 ರಾಜ್ಯಗಳಿಗೆ ಒಟ್ಟಾರೆ 1,01,603 ಕೋಟಿ ರೂ. ಹೆಚ್ಚುವರಿ ತೆರಿಗೆ ಹಂಚಿಕೆಯ ಮೊತ್ತವನ್ನು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದೆ. ಕರ್ನಾಟಕ ರಾಜ್ಯಕ್ಕೆ ಇದರಲ್ಲಿ 3,705 ಕೋಟಿ ರೂ. ಹಂಚಿಕೆಯಾಗಿದ್ದು, ರಾಜ್ಯ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಗಳಿಗೆ ಸಮರ್ಪಕವಾಗಿ ಬಳಸಲು ಸೂಚಿಸಲಾಗಿದೆ.
ಈ ಹೆಚ್ಚುವರಿ ಹಂಚಿಕೆ ಸಾಮಾನ್ಯ ಮಾಸಿಕ ಹಂಚಿಕೆಯ ಜೊತೆಗೆ ಅಕ್ಟೋಬರ್ 10ರಂದು ಬಿಡುಗಡೆಗೊಳ್ಳಲಿದೆ. ಕೇಂದ್ರ ಸರ್ಕಾರ ಈ ಹಂಚಿಕೆಯನ್ನು ರಾಜ್ಯಗಳ ಬಂಡವಾಳ ವೆಚ್ಚ ವೇಗಗೊಳಿಸುವುದು ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ನೆರವು ನೀಡುವಂತೆ ಉದ್ದೇಶಿಸಿದೆ. ಪ್ರಹ್ಲಾದ್ ಜೋಶಿ ರಾಜ್ಯ ಸರ್ಕಾರಗಳಿಗೆ, ಈ ಹಣವನ್ನು ಸಮರ್ಪಕವಾಗಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು ಎಂದು ಸೂಚಿಸಿದ್ದಾರೆ.
ಹಾಗೆಯೇ, ಹೆಚ್ಚುವರಿ ಹಂಚಿಕೆಯ ಜೊತೆಗೆ ರಾಜ್ಯದ ರೈತರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಬೆಂಬಲ ಬೆಲೆಗಳನ್ನು ಘೋಷಿಸಿದೆ. ತೀವ್ರ ಮಳೆಯಿಂದಾಗಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ರೈತರು ಬೆಳೆಹಾನಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಅನ್ನದಾತರಿಗೆ ಬೆಂಬಲ ಬೆಲೆಯ ನೆರವಿನ ಲಾಭವನ್ನು ತಲುಪಿಸಲು ಮನವಿ ಮಾಡಲಾಗಿದೆ. ಕಳೆದ ಕೆಲವು ದಿನಗಳಲ್ಲಿ ಕಬ್ಬು, ಉದ್ದಿನಕಾಳು, ಸೋಯಾಬಿನ್ ಮತ್ತು ಶೇಂಗಾ ಸೇರಿದಂತೆ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಲ್ಪಟ್ಟಿದ್ದು, ಹಿಂಗಾರು ಹಂಗಾಮಿನ ಗೋಧಿ, ಕುಸುಬೆ, ಬಾರ್ಲಿ, ಮಸೂರ್, ಸಾಸಿವೆ, ಕಡಲೆ ಸೇರಿದಂತೆ ವಿವಿಧ ಧಾನ್ಯಗಳ ಬೆಂಬಲ ಬೆಲೆ ಸಹ ಘೋಷಿಸಲಾಗಿದೆ.