January15, 2026
Thursday, January 15, 2026
spot_img

ಜಗ್ಗೇಶ್ ಶಪಥಕ್ಕೆ ಕೇಂದ್ರದ ಅಸ್ತು: ಪೈರಸಿ ಮುಕ್ತ ಚಿತ್ರರಂಗದತ್ತ ಮಹತ್ವದ ಹೆಜ್ಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರರಂಗವನ್ನು ಗೆದ್ದಲಿನಂತೆ ಕಾಡುತ್ತಿರುವ ‘ಪೈರಸಿ’ ವಿರುದ್ಧ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ನಡೆಸಿದ ಸಂಸತ್ತಿನ ಹೋರಾಟಕ್ಕೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಸಿನಿಮಾ ಪೈರಸಿಯನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ಜಗ್ಗೇಶ್ ಈ ಸಂತಸದ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ಜಗ್ಗೇಶ್ ಅವರು ಪೈರಸಿ ಕಳ್ಳರ ಹಾವಳಿಯ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸರ್ಕಾರ, ಆಧುನಿಕ ತಂತ್ರಜ್ಞಾನವನ್ನು ಬಳಸಿ ಪೈರಸಿ ಮಾಡುವವರನ್ನು ಪತ್ತೆಹಚ್ಚುವುದು, ಸಿನಿಮಾ ಪೈರಸಿ ಆ್ಯಪ್‌ಗಳನ್ನು ನಿಷೇಧಿಸುವುದು ಹಾಗೂ ತಪ್ಪಿತಸ್ಥರಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ.

View this post on Instagram

A post shared by 𝐉𝐀𝐆𝐆𝐄𝐒𝐇 𝐒𝐇𝐈𝐕𝐀𝐋𝐈𝐍𝐆𝐀𝐏𝐏𝐀 (@actor_jaggesh)

ಈ ಗೆಲುವಿನ ಸಂಭ್ರಮದ ನಡುವೆಯೂ ಜಗ್ಗೇಶ್ ಅವರು ಚಿತ್ರರಂಗದ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. “ಕಳೆದ 45 ವರ್ಷಗಳಿಂದ ಚಿತ್ರರಂಗದ ಅನ್ನ ಉಣ್ಣುತ್ತಿದ್ದೇನೆ. ಅದರ ಋಣ ತೀರಿಸುವ ಉದ್ದೇಶದಿಂದ ನಾನು ಮಾಡಿದ ಈ ಹೋರಾಟಕ್ಕೆ ಭಾಮಾ ಹರೀಶ್, ಬಣಕಾರ್ ಮತ್ತು ಅನಿಲ್ ಯಾದವ್ ಅವರಂತಹ ಕೆಲವರನ್ನು ಹೊರತುಪಡಿಸಿ, ಚಿತ್ರರಂಗದ ಮತ್ಯಾರೂ ಬೆಂಬಲ ನೀಡಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ನನ್ನ ಜೀವನದ ಪ್ರತಿ ಘಟ್ಟದಲ್ಲೂ ನಾನು ಏಕಾಂಗಿಯಾಗಿ ಹೋರಾಡಿ ಇಲ್ಲಿಯವರೆಗೆ ಬಂದಿದ್ದೇನೆ. ಕನ್ನಡಿಗರ ಆಶೀರ್ವಾದ ನನಗೆ ಶ್ರೀರಕ್ಷೆಯಾಗಿದೆ. ನನ್ನ ಕೊನೆಯ ಉಸಿರಿರುವವರೆಗೂ ರಾಘವೇಂದ್ರ ಸ್ವಾಮಿಗಳ ಆಶೀರ್ವಾದದೊಂದಿಗೆ ಉತ್ತಮ ಕಾರ್ಯಗಳನ್ನು ಮಾಡುತ್ತಲೇ ಇರುತ್ತೇನೆ” ಎಂದು ಜಗ್ಗೇಶ್ ಭಾವುಕರಾಗಿ ಬರೆದುಕೊಂಡಿದ್ದಾರೆ.

Must Read

error: Content is protected !!