Monday, January 12, 2026

ವಿಕೃತ ಶಿಕ್ಷಕನಿಗೆ ಚಪ್ಪಲಿ ಹಾರ: 22 ಜನರ ವಿರುದ್ಧ FIR! ಹಾವೇರಿಯಲ್ಲಿ ಹೈಡ್ರಾಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಶಾಲೆಯ ಮುಖ್ಯೋಪಾಧ್ಯಾಯನಿಗೆ ಚಪ್ಪಲಿ ಹಾರ ಹಾಕಿ ಸಾರ್ವಜನಿಕವಾಗಿ ಅಪಮಾನಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣವು ಇದೀಗ ಮತ್ತೊಂದು ತಿರುವು ಪಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ 22 ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಸವಣೂರು ಪಟ್ಟಣದಲ್ಲಿ ಡಿ. 10 ರಂದು ಈ ಘಟನೆ ನಡೆದಿತ್ತು. ಶಾಲೆಯ ಮುಖ್ಯ ಶಿಕ್ಷಕ ರಾಜೇಸಾಬ ಖುದಾನಸಾಬ ಸಂಕನೂರ ಅವರು ನೀಡಿದ ದೂರಿನ ಆಧಾರದ ಮೇಲೆ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮುಖ್ಯೋಪಾಧ್ಯಾಯ ಜಗದೀಶ್ ವಗ್ಗಣ್ಣನವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇದೀಗ, ಮುಖ್ಯೋಪಾಧ್ಯಾಯ ಜಗದೀಶ್ ವಗ್ಗಣ್ಣನವರ ಅವರು ಸಹ ಪ್ರತಿದೂರು ದಾಖಲಿಸಿದ್ದಾರೆ. ಶಾಲೆಗೆ ನುಗ್ಗಿ ತನ್ನನ್ನು ಥಳಿಸಿ, ಚಪ್ಪಲಿಯಿಂದ ಹೊಡೆದು, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡುವ ಮೂಲಕ ಅಪಮಾನಗೊಳಿಸಿದ ಮತ್ತು ಜೀವಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ಸಾರ್ವಜನಿಕವಾಗಿ ಅಪಮಾನ ಮಾಡಿ, ಜೀವಬೆದರಿಕೆ ಒಡ್ಡಿರುವ ಆರೋಪದಡಿ ಸವಣೂರು ಪೊಲೀಸರು ಒಟ್ಟು 22 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಘಟನೆಯ ವಿಡಿಯೋ ತುಣುಕುಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸಾದಿಕ್ ಮನಿಯಾರ್, ಜಿಶನ್ ನಾಗದ, ಅಬ್ದುಲಗನಿ ಪರಾಸ್, ಫಾಜಿಲ್‌ಅಹ್ಮದ್ ಮನಿಯಾರ್, ಅತ್ತಾವುಲ್ಲ ಖಾನ್ ಭಕ್ಷಿ, ಸುಲೇದ್ ಮನಿಯಾರ್, ಮೋಷಿನ್ ಖತೀಬ್, ಆಸಿಫ್ ದುಖಂದರ್, ಇಮ್ರಾನ್ ಖಾಂಜಾಡೆ, ಮಹಮ್ಮದ್ ಅಸಂ ತೆಲಾರ್, ಅಮಿರಾಖಾನ್ ಗುತ್ತಲ, ಅಹ್ಮದ್‌ಖಾನ್ ಖಾಂಜಾಡೆ, ಅಲ್ಲಾಭಕ್ಷ ಚೋಪದಾರ್, ದಾದಾಪೀರ ಮೊಹಮ್ಮದ್ ಅಸೀಮ್ ಕಿಲ್ಲೇದಾರ, ಅಶೋಕ ಮನ್ನಂಗಿ, ಮಹಮ್ಮದ್-ಫೀಕ್ ಚುಡಿಗಾರ, ಆಸಿಫ್ ಅಹ್ಮದ್ ದುಖಾಂದಾರ್, ಅಲ್ತಾಫ್ ಮಕಾಂನದಾರ, ಮಹಮ್ಮದ್ ಹಷತ್ ಕಿಲ್ಲೇದಾರ, ಮಹಮ್ಮದ್ ಸಾದಿಕ್ ಚೋಪದಾರ್, ದಾದಾಪೀರ ತಂಬುಳಿ, ಮತ್ತು ಮಹಮ್ಮದ್‌ಹನೀಫ್ ದುಖಾಂದಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಬಗ್ಗೆ ಅಧಿಕೃತ ದೂರು ನೀಡಿಲ್ಲ. ಹಾಗಾಗಿ, ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ನಡುವಿನ ವೈಯಕ್ತಿಕ ವೈಮನಸ್ಸಿನಿಂದಾಗಿ ಈ ರೀತಿಯ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಈ ದ್ವಿಮುಖ ಪ್ರಕರಣಗಳ ಕುರಿತು ಸವಣೂರು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!