Thursday, November 6, 2025

ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ @37: ದಾಖಲೆಗಳ ಸರದಾರನಿಗೆ ಹುಟ್ಟುಹಬ್ಬದ ಸಂಭ್ರಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವ ಕ್ರಿಕೆಟ್‌ನಲ್ಲಿ ‘ಚೇಸ್ ಮಾಸ್ಟರ್’ ಎಂದು ಕರೆಯಲ್ಪಡುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂದು ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. 1988ರ ನವೆಂಬರ್ 5ರಂದು ದೆಹಲಿಯಲ್ಲಿ ಜನಿಸಿದ ಕೊಹ್ಲಿ, 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟರು. ಆರಂಭದಿಂದಲೇ ತಮ್ಮ ಆಕ್ರಮಣಕಾರಿ ಶೈಲಿ ಮತ್ತು ನಿಖರ ತಂತ್ರದ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳ ಮನ ಗೆದ್ದ ಅವರು, ಇಂದು ಕ್ರಿಕೆಟ್‌ನ ಪ್ರತೀ ಮಾದರಿಯಲ್ಲೂ ವಿಶಿಷ್ಟ ಗುರುತು ಮೂಡಿಸಿದ್ದಾರೆ. ಟಿ20 ಮತ್ತು ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ಕೊಹ್ಲಿ, ಇನ್ನೂ ಏಕದಿನ ಮಾದರಿಯಲ್ಲಿ ಭಾರತದ ಪರ ರಣರಂಗದಲ್ಲಿ ಬ್ಯಾಟಿಂಗ್ ಚಮತ್ಕಾರ ತೋರಿಸುತ್ತಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ಸತತ ರನ್‌ ಮಳೆ ಎಲ್ಲರನ್ನೂ ಆಶ್ಚರ್ಯಕ್ಕೊಳಪಡಿಸಿದೆ. ಕೇವಲ 205 ಇನ್ನಿಂಗ್ಸ್‌ಗಳಲ್ಲಿ 10,000 ರನ್‌ಗಳ ಗಡಿ ದಾಟಿದ ಅವರು, ಸಚಿನ್ ತೆಂಡೂಲ್ಕರ್‌ ಅವರ ದಾಖಲೆ (259 ಇನ್ನಿಂಗ್ಸ್‌) ಮುರಿದಿದ್ದಾರೆ.

ಟೀಮ್‌ ಇಂಡಿಯಾ ಚೇಸಿಂಗ್‌ ವೇಳೆ ಮೈದಾನದಲ್ಲಿ ವಿರಾಟ್ ಇದ್ದರೆ, ಗೆಲುವು ಖಚಿತ ಎಂಬ ನಂಬಿಕೆ ಅಭಿಮಾನಿಗಳಲ್ಲಿದೆ. ಏಕದಿನ ಪಂದ್ಯಗಳಲ್ಲಿ ಗುರಿ ಬೆನ್ನಟ್ಟುವಾಗ 50ಕ್ಕಿಂತ ಹೆಚ್ಚು ರನ್‌ಗಳ 70 ಇನ್ನಿಂಗ್ಸ್‌ ಗಳಿಸಿದ್ದು, ಇದು ವಿಶ್ವ ಕ್ರಿಕೆಟ್‌ನಲ್ಲಿ ಯಾರಿಗೂ ಅಲುಗಾಡಿಸಲು ಸಾಧ್ಯವಾಗದ ದಾಖಲೆ.

2023ರ ಏಕದಿನ ವಿಶ್ವಕಪ್‌ ವಿರಾಟ್ ಕೊಹ್ಲಿ ಅವರ ವೃತ್ತಿಜೀವನದ ಅತ್ಯಂತ ಮೆರಗು ತೋರಿದ ಟೂರ್ನಿಯಾಗಿತ್ತು. ಅವರು 11 ಇನ್ನಿಂಗ್ಸ್‌ಗಳಲ್ಲಿ 95.62 ಸರಾಸರಿಯಲ್ಲಿ 765 ರನ್‌ಗಳನ್ನು ಬಾರಿಸಿ, ಒಂದೇ ಆವೃತ್ತಿಯ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು.

ಟೆಸ್ಟ್‌ನಲ್ಲಿ ನಾಯಕನಾಗಿ ಏಳು ದ್ವಿಶತಕಗಳ ದಾಖಲೆ:
ಭಾರತದ ನಾಯಕನಾಗಿ ಕೊಹ್ಲಿ ಕೇವಲ ಫಲಿತಾಂಶಗಳನ್ನು ಮಾತ್ರವಲ್ಲ, ಧೈರ್ಯ ಮತ್ತು ಆತ್ಮವಿಶ್ವಾಸದ ಹೊಸ ಮಾದರಿಯನ್ನು ಸ್ಥಾಪಿಸಿದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಯಕನಾಗಿ ಏಳು ದ್ವಿಶತಕ ಗಳಿಸಿದ ಏಕೈಕ ಭಾರತೀಯ ಅವರು, ಈ ದಾಖಲೆಯ ಮೂಲಕ ನಾಯಕತ್ವದ ಉನ್ನತ ಶಿಖರವನ್ನು ಮುಟ್ಟಿದರು.

2023ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಶತಕ ಬಾರಿಸಿದಾಗ, ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್‌ ಅವರ 49 ಶತಕಗಳ ದಾಖಲೆಯನ್ನು ಮೀರಿಸಿ 50ನೇ ಶತಕ ದಾಖಲಿಸಿದರು. ಪ್ರಸ್ತುತ ಅವರು ಒಟ್ಟು 51 ಏಕದಿನ ಶತಕಗಳೊಂದಿಗೆ ವಿಶ್ವದ ಅಗ್ರ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

error: Content is protected !!