Wednesday, September 3, 2025

ನಿವೃತ್ತಿ ಘೋಷಿಸಿದ ಚೇತೇಶ್ವರ ಪೂಜಾರ: ಎರಡನೇ ಇನ್ನಿಂಗ್ಸ್‌ಗೆ ಶುಭ ಹಾರೈಸಿದ ಪ್ರಧಾನಿ ಮೋದಿ

ಭಾರತೀಯ ಕ್ರಿಕೆಟ್‌ನ ಟೆಸ್ಟ್ ಸ್ಪೆಷಲಿಸ್ಟ್ ಖ್ಯಾತಿಯ ಚೇತೇಶ್ವರ ಪೂಜಾರ ಅವರು ಆಗಸ್ಟ್ 24ರಂದು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅವರ ನಿವೃತ್ತಿಯ ಬಳಿಕ ವಿಶ್ವ ಕ್ರಿಕೆಟ್‌ನ ಅನೇಕ ಗಣ್ಯರಿಂದ ಶುಭಾಶಯ ಸಂದೇಶಗಳು ಹರಿದುಬಂದಿದ್ದವು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಪೂಜಾರ ಅವರಿಗೆ ಹೃದಯಸ್ಪರ್ಶಿ ಪತ್ರ ಬರೆದು, ಅವರ ವೃತ್ತಿಜೀವನವನ್ನು ಶ್ಲಾಘಿಸಿದ್ದು, ಎರಡನೇ ಇನ್ನಿಂಗ್ಸ್‌ಗೆ ಶುಭ ಹಾರೈಸಿದ್ದಾರೆ. ಪೂಜಾರ ಅವರು ಸ್ವತಃ ಈ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ.

ಪತ್ರದಲ್ಲಿ ಪ್ರಧಾನಿ ಮೋದಿ ಅವರು, “ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತರಾಗುವ ನಿಮ್ಮ ನಿರ್ಧಾರದ ಬಗ್ಗೆ ನನಗೆ ತಿಳಿಯಿತು. ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರಪಂಚದಿಂದ ನಿಮ್ಮ ಸಾಧನೆಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ನಿಮ್ಮ ಅದ್ಭುತ ಕ್ರಿಕೆಟ್ ವೃತ್ತಿಜೀವನಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು” ಎಂದು ಬರೆದಿದ್ದಾರೆ.

“ಕ್ರಿಕೆಟ್‌ನ ಕಡಿಮೆ ಸ್ವರೂಪಗಳು ಪ್ರಾಬಲ್ಯ ಹೊಂದಿರುವ ಕಾಲಘಟ್ಟದಲ್ಲೂ, ನೀವು ದೀರ್ಘ ಸ್ವರೂಪದ ಆಟದ ಸೌಂದರ್ಯವನ್ನು ನೆನಪಿಸಿದ್ದೀರಿ. ನಿಮ್ಮ ಮನೋಧರ್ಮ ಮತ್ತು ಏಕಾಗ್ರತೆಯಿಂದ ದೀರ್ಘಕಾಲ ಬ್ಯಾಟಿಂಗ್ ಮಾಡಿದ ಸಾಮರ್ಥ್ಯವು ಭಾರತೀಯ ಬ್ಯಾಟಿಂಗ್ ಕ್ರಮಾಂಕದ ಆಧಾರಸ್ತಂಭವನ್ನಾಗಿ ಮಾಡಿತು. ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ನೀಡಿದ ನಿಮ್ಮ ಅದ್ಭುತ ಪ್ರದರ್ಶನವನ್ನು ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ” ಎಂದು ಪ್ರಧಾನಿ ಮೋದಿ ಹೊಗಳಿದ್ದಾರೆ.

ಪೂಜಾರ ತಂದೆಯಾದ ಶರದ್ ಪೂಜಾರ ಅವರಿಗೆ ಈ ಸಾಧನೆ ಹೆಮ್ಮೆ ತರಲಿದೆ ಎಂದು ಮೋದಿ ಹೇಳಿದರು. ಪತ್ನಿ ಪೂಜಾ ಮತ್ತು ಮಗಳು ಅದಿತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು ಅವಕಾಶ ಸಿಗಲಿದೆ ಎಂದೂ ಅವರು ಉಲ್ಲೇಖಿಸಿದರು. ಮೈದಾನದ ಆಚೆಗೆ ವೀಕ್ಷಕ ವಿವರಣೆಗಾರರಾಗಿ ಪೂಜಾರ ನೀಡುವ ವಿಶ್ಲೇಷಣೆ ಕ್ರಿಕೆಟ್ ಪ್ರಿಯರಿಗೆ ಉಪಯುಕ್ತವಾಗಲಿದೆ ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ಬರೆದಿದ್ದಾರೆ.

View this post on Instagram

A post shared by Cheteshwar Pujara (@cheteshwar_pujara)

ಇದನ್ನೂ ಓದಿ