ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಹೊಂಬಾಳೆ ಫಿಲ್ಮ್ಸ್‌ನ ಕಾಂತಾರ: ಅಧ್ಯಾಯ 1 ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಸಾಧಾರಣ ಯಶಸ್ಸಿನಿಂದ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ. ಚಿತ್ರವು ಈಗ ವಿಶ್ವದಾದ್ಯಂತ 800 ಕೋಟಿ ರೂ.ಗಳಿಗಿಂತ ಹೆಚ್ಚು ಗಳಿಸಿ, 2025ರ ಅತ್ಯಧಿಕ ಕಲೆಕ್ಷನ್ ಮಾಡಿರೋ ಭಾರತೀಯ ಚಿತ್ರ ಎಂಬ ಗೌರವವನ್ನು ಗಳಿಸಿದೆ.
ಮೂರನೇ ವಾರಕ್ಕೂ ತನ್ನ ಶಕ್ತಿ ಕಳೆದುಕೊಳ್ಳದೆ, ಕರ್ನಾಟಕದಾದ್ಯಂತ ಚಿತ್ರಮಂದಿರಗಳು ಪ್ರೇಕ್ಷಕರಿಂದ ತುಂಬಿ ತುಳುಕುತ್ತಿವೆ. ಪ್ರಸ್ತುತ ಚಿತ್ರದ ಒಟ್ಟು ಸಂಗ್ರಹ 818 ಕೋಟಿ ರೂ. ತಲುಪಿದ್ದು, ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಹಾಗೂ ಸೈಯಾರಾ ಮುಂತಾದ ಚಿತ್ರಗಳ ದಾಖಲೆಯನ್ನು ಮೀರಿಸಿದೆ. ಇದೇ ವೇಳೆ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರದ 554 ಕೋಟಿ ರೂ. ಸಂಗ್ರಹವನ್ನೂ ಹಿಂದಿಕ್ಕಿದೆ.
ಕರ್ನಾಟಕದಲ್ಲಿ ಮಾತ್ರ ಈ ಸಿನಿಮಾ 250 ಕೋಟಿ ರೂ.ಗಳಿಗಿಂತ ಹೆಚ್ಚು ಗಳಿಸಿದ ಮೊದಲ ಕನ್ನಡ ಚಿತ್ರವಾಗಿದ್ದು, ರಾಜ್ಯದ ಚಿತ್ರರಂಗದ ಪ್ರಗತಿಗೆ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಮತ್ತು ಚಲುವೆ ಗೌಡ ನಿರ್ಮಿಸಿರುವ ಈ ಚಿತ್ರವನ್ನು ಇಂಗ್ಲಿಷ್ ಭಾಷೆಯಲ್ಲಿಯೂ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದ್ದು, ಆಸ್ಕರ್ ಪರಿಗಣನೆಗೂ ಚಿತ್ರವನ್ನು ಸಲ್ಲಿಸಲು ನಿರ್ಮಾಪಕರು ಯೋಜಿಸಿದ್ದಾರೆ.

