ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಸಿಎಂ ಸ್ಥಾನಕ್ಕೆ “500 ಕೋಟಿ ರೂ.ಗಳ ಸೂಟ್‌ಕೇಸ್” ನೀಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿ ಕಾಂಗ್ರೆಸ್ ಹೈಕಮಾಂಡ್ಗೆ ಮುಜುಗರ ತಂದಿದ್ದು, ಹೀಗಾಗಿ ಕಾಂಗ್ರೆಸ್ ಪಕ್ಷ ಅವರನ್ನು ಅಮಾನತುಗೊಳಿಸಿದೆ.
500 ಕೋಟಿ ರೂ. ಸೂಟ್‌ಕೇಸ್ ನೀಡುವವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಅವರ ಹೇಳಿಕೆಯಿಂದ ನವಜೋತ್ ಕೌರ್ ಭಾರಿ ವಿವಾದಕ್ಕೀಡಾಗಿದ್ದರು.
ತನ್ನ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದ ಕಾಂಗ್ರೆಸ್ ನಾಯಕಿಯೂ ಆಗಿರುವ ನವಜೋತ್ ಕೌರ್, ‘ನಮ್ಮ ಕಾಂಗ್ರೆಸ್ ಪಕ್ಷವು ನಮ್ಮಿಂದ ಎಂದಿಗೂ ಏನನ್ನೂ ಬೇಡಿಕೆ ಇಟ್ಟಿಲ್ಲ. ಬೇರೆ ಪಕ್ಷದಿಂದ ನಮಗೆ ಸಿಎಂ ಸ್ಥಾನದ ಆಮಿಷವಿದೆಯೇ ಎಂದು ಕೇಳಿದಾಗ ನಾನು ಸಿಎಂ ಹುದ್ದೆಗೆ ನೀಡಲು ನಮ್ಮಲ್ಲಿ 500 ಕೋಟಿ ರೂ. ಹಣವಿಲ್ಲ ಎಂದು ಹೇಳಿದ್ದೆ. ನಮ್ಮ ಪಕ್ಷದ ಬಗ್ಗೆ ನಾನು ಮಾತಾಡಿಲ್ಲ, ಬೇರೆ ಪಕ್ಷಕ್ಕೆ ಆ ಮಾತು ಹೇಳಿದ್ದೆ’ ಎಂದು ಸ್ಪಷ್ಟನೆ ನೀಡಿದ್ದರು.
ಆದ್ರೆ ಸಾಮಾಜಿಕ ಮಾಧ್ಯಮದಲ್ಲಿ ಅವರು ಸ್ಪಷ್ಟೀಕರಣ ನೀಡಿದ್ದರೂ ಅದು ಕಾಂಗ್ರೆಸ್ಗೆ ಸಮಾಧಾನ ತರಲಿಲ್ಲ. ಅವರ ಹೇಳಿಕೆಯಿಂದ ಕಾಂಗ್ರೆಸ್ ಹೈಕಮಾಂಡ್ ಮುಜುಗರಕ್ಕೀಡಾಗಿದ್ದರಿಂದ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

