ಪರೋಟ ಎಂದರೆ ಎಲ್ಲರಿಗೂ ಇಷ್ಟವಾಗುವ ಒಂದು ವಿಶಿಷ್ಟವಾದ ತಿನಿಸು. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಅಥವಾ ರಾತ್ರಿ ಊಟಕ್ಕೆ ಸರಿ ಬರುವಂತಹದ್ದು. ಸಾಮಾನ್ಯ ಪರೋಟಗಳನ್ನು ಬೇರೆ ಬೇರೆ ರೀತಿಯಲ್ಲಿ ಮಾಡಬಹುದು. ಆದರೆ ಇಂದು ನಾವು ಸ್ವಲ್ಪ ಸ್ಪೈಸಿ ಟಚ್ ಇರುವ ಚಿಲ್ಲಿ ಗಾರ್ಲಿಕ್ ಪರೋಟ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ.
ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು – ½ ಕಪ್
ಬೆಣ್ಣೆ – 1 ಚಮಚ
ತುರಿದ ಬೆಳ್ಳುಳ್ಳಿ – 1 ಚಮಚ
ಚಿಲ್ಲಿ ಫ್ಲೇಕ್ಸ್ – 1 ಚಮಚ
ಹೆಚ್ಚಿದ ಹಸಿರು ಮೆಣಸು – ½ ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯವಿರುವಷ್ಟು
ಮಾಡುವ ವಿಧಾನ:
ಮೊದಲಿಗೆ ಒಂದು ಬೌಲ್‌ನಲ್ಲಿ ಬೆಣ್ಣೆ, ತುರಿದ ಬೆಳ್ಳುಳ್ಳಿ, ಚಿಲ್ಲಿ ಫ್ಲೇಕ್ಸ್, ಹಸಿರು ಮೆಣಸು ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇನ್ನೊಂದು ಬೌಲ್‌ನಲ್ಲಿ ಗೋಧಿ ಹಿಟ್ಟು ಮತ್ತು ಉಪ್ಪನ್ನು ಹಾಕಿ, ಸ್ವಲ್ಪ ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ಕಲಸಿಕೊಳ್ಳಿ. ಈಗ ಬೆಣ್ಣೆ-ಮಸಾಲೆಯ ಮಿಶ್ರಣವನ್ನು ಹಿಟ್ಟಿನೊಂದಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು, ಸ್ವಲ್ಪ ದಪ್ಪಕ್ಕೆ ಲಟ್ಟಿಸಿಕೊಳ್ಳಿ.
ಪ್ಯಾನ್ ಬಿಸಿಗಿಟ್ಟು ಅದಕ್ಕೆ ಸ್ವಲ್ಪ ಬೆಣ್ಣೆ ಹಾಕಿ, ಬೆಣ್ಣೆ ಕರಗಿದ ನಂತರ ಪರೋಟವನ್ನು ಎರಡೂ ಬದಿ ಚೆನ್ನಾಗಿ ಬೇಯಿಸಿ ಬಿಸಿ ಬಿಸಿ ಪರೋಟವನ್ನು ಸರ್ವ್ ಮಾಡಿ.