April 10, 2026
Friday, April 10, 2026
spot_img

ಸಂಸದ ಕಾರಜೋಳ ಭೇಟಿ ಬೆನ್ನಲ್ಲೇ ಚಿತ್ರದುರ್ಗ ಕಾಲೇಜು ಪ್ರಾಂಶುಪಾಲರಿಗೆ ಸಂಕಷ್ಟ

ಹೊಸದಿಗಂತ ಚಿತ್ರದುರ್ಗ:

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಲು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಸಂಸದ ಗೋವಿಂದ ಕಾರಜೋಳ ಅವರ ನಡೆ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಭೇಟಿಯ ಹಿನ್ನೆಲೆಯಲ್ಲಿ ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ನೋಟಿಸ್ ಜಾರಿ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಶನಿವಾರದಿಂದ ಆರಂಭವಾದ ಪಿಯುಸಿ ಪರೀಕ್ಷೆಯ ಸಂದರ್ಭದಲ್ಲಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲು ಸಂಸದ ಗೋವಿಂದ ಕಾರಜೋಳ ಅವರು ತಮ್ಮ ಬೆಂಬಲಿಗರು ಮತ್ತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಕಾಲೇಜು ಆವರಣಕ್ಕೆ ಭೇಟಿ ನೀಡಿದ್ದರು. ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ಅನಧಿಕೃತವಾಗಿ ಜನಪ್ರತಿನಿಧಿಗಳು ಮತ್ತು ಅವರ ತಂಡ ಪ್ರವೇಶ ಮಾಡಿರುವುದು ಪರೀಕ್ಷಾ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ಇಲಾಖೆ ಆಕ್ಷೇಪಿಸಿದೆ.

ಈ ಭೇಟಿಯಿಂದ ಇಲಾಖೆಗೆ ಮುಜುಗರ ಉಂಟಾಗಿದೆ ಎಂದು ಉಲ್ಲೇಖಿಸಿರುವ ಡಿಡಿಪಿಿಯು (DDPIU), ಕಾಲೇಜಿನ ಪ್ರಾಂಶುಪಾಲರಾದ ಎನ್. ದೊಡ್ಡಪ್ಪ ಅವರಿಗೆ ಶಿಸ್ತುಕ್ರಮದ ನೋಟಿಸ್ ನೀಡಿದ್ದಾರೆ. ಪರೀಕ್ಷಾ ಕೇಂದ್ರದ ಪಾವಿತ್ರ್ಯತೆ ಮತ್ತು ಭದ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

ಆದರೆ, ಇಲಾಖೆಯ ಈ ಕ್ರಮದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. “ಪರೀಕ್ಷೆ ಎದುರಿಸುತ್ತಿರುವ ಮಕ್ಕಳಿಗೆ ಧೈರ್ಯ ತುಂಬುವುದು ತಪ್ಪೇ? ಒಬ್ಬ ಜನಪ್ರತಿನಿಧಿಯಾಗಿ ಸಂಸದರು ಭೇಟಿ ನೀಡಿದ್ದರಲ್ಲಿ ಅಂತಹ ದೊಡ್ಡ ಅಪರಾಧವೇನಿದೆ?” ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಪರೀಕ್ಷಾ ಕೇಂದ್ರಕ್ಕೆ ಜನಪ್ರತಿನಿಧಿಗಳ ಭೇಟಿಯನ್ನು ಕೇವಲ ನಿಯಮದ ಕನ್ನಡಕದಿಂದ ನೋಡುವುದು ಸರಿಯಲ್ಲ ಎಂಬ ಚರ್ಚೆಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !