Sunday, January 25, 2026
Sunday, January 25, 2026
spot_img

ಚೋರ್ಲಾ ಘಾಟ್ ಚೇಸಿಂಗ್: 400 ಕೋಟಿ ಅಲ್ಲ, ದರೋಡೆಯಾಗಿದ್ದು ಬರೋಬ್ಬರಿ 1000 ಕೋಟಿ!

ಹೊಸದಿಗಂತ ಬೆಳಗಾವಿ:

ಕರ್ನಾಟಕದ ಗಡಿಭಾಗವಾದ ಖಾನಾಪುರ ತಾಲೂಕಿನ ಚೋರ್ಲಾ ಘಾಟ್‌ನಲ್ಲಿ ನಡೆದಿದೆ ಎನ್ನಲಾದ ದೇಶದ ಅತಿ ದೊಡ್ಡ ದರೋಡೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಮೊದಲು 400 ಕೋಟಿ ರೂಪಾಯಿ ದರೋಡೆ ಎನ್ನಲಾಗಿದ್ದ ಈ ಪ್ರಕರಣದಲ್ಲಿ, ಈಗ ಬರೋಬ್ಬರಿ 1,000 ಕೋಟಿ ರೂಪಾಯಿ ಲೂಟಿಯಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ದೂರುದಾರ ಸಂದೀಪ್ ಪಾಟೀಲ್ ನೀಡಿರುವ ಹೇಳಿಕೆಯ ಪ್ರಕಾರ, 2025ರ ಅಕ್ಟೋಬರ್ 16ರಂದು ಗೋವಾದಿಂದ ಮಹಾರಾಷ್ಟ್ರಕ್ಕೆ ಎರಡು ಕಂಟೇನರ್‌ಗಳಲ್ಲಿ ಹಣ ಸಾಗಿಸಲಾಗುತ್ತಿತ್ತು. ಈ ಕಂಟೇನರ್‌ಗಳಲ್ಲಿ ಚಲಾವಣೆಯಿಂದ ರದ್ದಾಗಿದ್ದ 2,000 ರೂಪಾಯಿ ಮುಖಬೆಲೆಯ ನೋಟುಗಳಿದ್ದವು. ಚೋರ್ಲಾ ಘಾಟ್ ತಲುಪುತ್ತಿದ್ದಂತೆ ಕಂಟೇನರ್‌ಗಳನ್ನು ಹೈಜಾಕ್ ಮಾಡಲಾಗಿದ್ದು, ಇದು ಭಾರತದ ಅಪರಾಧ ಇತಿಹಾಸದಲ್ಲೇ ಅತಿದೊಡ್ಡ ದರೋಡೆ ಎಂದು ಹೇಳಲಾಗುತ್ತಿದೆ.

ಪ್ರಕರಣದ ದೂರುದಾರ ಸಂದೀಪ್ ಪಾಟೀಲ್ ಕೇವಲ ದರೋಡೆಯ ಬಗ್ಗೆ ಮಾತ್ರವಲ್ಲದೆ, ತನ್ನ ಅಪಹರಣದ ಬಗ್ಗೆಯೂ ವಿಡಿಯೋ ಹೇಳಿಕೆ ನೀಡಿದ್ದಾರೆ. “ಕಂಟೇನರ್ ಹೈಜಾಕ್‌ಗೆ ನೀನೇ ಕಾರಣ” ಎಂದು ಆರೋಪಿಸಿ, ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಸಹಚರರು ಸಂದೀಪ್‌ನನ್ನು ಗನ್ ಪಾಯಿಂಟ್‌ನಲ್ಲಿ ಕಿಡ್ನಾಪ್ ಮಾಡಿದ್ದರು. ಸುಮಾರು ಒಂದೂವರೆ ತಿಂಗಳ ಕಾಲ ಕೂಡಿಟ್ಟು ಚಿತ್ರಹಿಂಸೆ ನೀಡಲಾಗಿದ್ದು, ಇಬ್ಬರು ಪೊಲೀಸರು ಕೂಡ ತನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.

ಸದ್ಯ ನಾಸಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಇಬ್ಬರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಈ ಪ್ರಕರಣವು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ದೂರುದಾರನ ಹೇಳಿಕೆಯಲ್ಲಿ ಹಲವು ಅನುಮಾನಗಳಿದ್ದು, ನಿಜವಾಗಿಯೂ ಅಲ್ಲಿ ಅಷ್ಟು ದೊಡ್ಡ ಮೊತ್ತದ ಹಣವಿತ್ತೇ? ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಮಾಫಿಯಾ ಇದೆಯೇ? ಎಂಬುದು ಪೊಲೀಸ್ ತನಿಖೆಯಿಂದಷ್ಟೇ ತಿಳಿಯಬೇಕಿದೆ.

Must Read