ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಯಿಂದ ಆರಂಭಗೊಂಡ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ದೇಶಾದ್ಯಂತ ಹಾಗೂ ವಿದೇಶದಲ್ಲಿಯೂ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ದೀಪಾವಳಿಯ ವೇಳೆಗೆ ಸಿನಿಮಾ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ವಾರದ ದಿನಗಳಲ್ಲಿಯೂ ಚಿತ್ರ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅಕ್ಟೋಬರ್ 12ರ ವೇಳೆಗೆ ಭಾರತದಲ್ಲಿ ಒಟ್ಟು 438 ಕೋಟಿ ರೂಪಾಯಿ ಕಲೆಕ್ಷನ್ ದಾಖಲಿಸಿತ್ತು. ನಂತರದ ಸೋಮವಾರ ಹಾಗೂ ಮಂಗಳವಾರವೂ ಸಿನಿಮಾದ ಗೆಲುವಿನ ಲೆಕ್ಕ ನಿಂತಿಲ್ಲ. ಸೋಮವಾರ 13.35 ಕೋಟಿ ಹಾಗೂ ಮಂಗಳವಾರ 13.50 ಕೋಟಿ ರೂಪಾಯಿ ಗಳಿಕೆ ಮೂಲಕ ಚಿತ್ರವು 465 ಕೋಟಿಯ ಅಂಚು ತಲುಪಿದೆ. ಈಗ 500 ಕೋಟಿ ರೂಪಾಯಿ ಕ್ಲಬ್ ಸೇರುವುದಕ್ಕೆ ಕೇವಲ 35 ಕೋಟಿ ರೂಪಾಯಿ ಮಾತ್ರ ಬಾಕಿಯಿದ್ದು, ವಾರಾಂತ್ಯದೊಳಗೆ ಈ ಸಾಧನೆ ಸಾಧ್ಯವೆಂದು ವೀಕ್ಷಕರು ಅಂದಾಜು ಮಾಡಿದ್ದಾರೆ.
ವಿಶ್ವ ಮಟ್ಟದಲ್ಲಿ ಈಗಾಗಲೇ 700 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿರುವ ‘ಕಾಂತಾರ: ಚಾಪ್ಟರ್ 1’, ದೀಪಾವಳಿಯ ಸಮಯದಲ್ಲಿ ಬಿಡುಗಡೆಯಾದರೆ ಅಥವಾ ಹೊಸ ವೀಕ್ಷಕರ ಸೆಳೆತ ಹೆಚ್ಚಾದರೆ 1000 ಕೋಟಿಯ ಕ್ಲಬ್‌ಗೆ ಪ್ರವೇಶಿಸುವ ಸಾಧ್ಯತೆ ಇದೆ. ಇದು ಕನ್ನಡ ಚಿತ್ರರಂಗದ ಮತ್ತೊಂದು ಐತಿಹಾಸಿಕ ಕ್ಷಣವಾಗಲಿದೆ.
ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಅವರು ನಾಯಕನ ಪಾತ್ರವನ್ನೂ ನಿರ್ವಹಿಸಿದ್ದು, ಜನಪದ ಕಥಾಹಂದರ, ಸಂಸ್ಕೃತಿಯ ಆಳ ಮತ್ತು ಪ್ರಬಲ ಅಭಿನಯದ ಸಂಯೋಜನೆಯಿಂದ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರ ಮನಸ್ಸು ಗೆದ್ದಿದೆ.