ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿರುವ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಚಿತ್ರದ ಎರಡನೇ ಭಾಗದ ಬಗ್ಗೆ ಈಗ ಬಿಗ್ ಅಪ್‌ಡೇಟ್ ಸಿಕ್ಕಿದೆ. ಕಳೆದ ಡಿಸೆಂಬರ್ 5 ರಂದು ಬಿಡುಗಡೆಯಾಗಿ ವಿಶ್ವಾದ್ಯಂತ 1300 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಅಬ್ಬರಿಸಿದ್ದ ಈ ಸಿನಿಮಾ, ಈಗ ಸೀಕ್ವೆಲ್ ಮೂಲಕ ಬರಲು ಸಿದ್ಧವಾಗಿದೆ.
‘ಧುರಂಧರ್’ ಚಿತ್ರದ ಕೊನೆಯಲ್ಲೇ ಎರಡನೇ ಭಾಗದ ಘೋಷಣೆ ಮಾಡಲಾಗಿತ್ತು. ಈಗ ‘ಧುರಂಧರ್: ದಿ ರಿವೆಂಜ್’ ಹೆಸರಿನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಟೀಸರ್ ಅನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿದೆ. ಜನವರಿ 19 ರಂದು ಟೀಸರ್ ಅನ್ನು ಅನುಮೋದಿಸಿರುವ ಮಂಡಳಿಯು, ಅದಕ್ಕೆ ‘ಎ’ (Adults Only) ಪ್ರಮಾಣಪತ್ರ ನೀಡಿದೆ. 1 ನಿಮಿಷ 48 ಸೆಕೆಂಡ್‌ಗಳ ಅವಧಿಯ ಈ ಟೀಸರ್‌ನಲ್ಲಿ ಭಾರೀ ಹಿಂಸೆ ಮತ್ತು ಆ್ಯಕ್ಷನ್ ದೃಶ್ಯಗಳಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ವಿಶೇಷವೆಂದರೆ, ಸನ್ನಿ ಡಿಯೋಲ್ ಅಭಿನಯದ ಬಹುನಿರೀಕ್ಷಿತ ‘ಬಾರ್ಡರ್ 2’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ, ಅದರ ಮಧ್ಯಂತರದಲ್ಲಿ ಅಥವಾ ಆರಂಭದಲ್ಲಿ ‘ಧುರಂಧರ್-2’ ಟೀಸರ್ ಪ್ರದರ್ಶನಗೊಳ್ಳಲಿದೆ. ಪ್ರೇಕ್ಷಕರ ನಾಡಿಮಿಡಿತ ಬಲ್ಲ ಆದಿತ್ಯ ಧಾರ್, ಮೊದಲ ಭಾಗಕ್ಕಿಂತಲೂ ಹೆಚ್ಚು ಶಕ್ತಿಶಾಲಿಯಾಗಿ ಈ ಎರಡನೇ ಭಾಗವನ್ನು ಕಟ್ಟಿಕೊಡುತ್ತಿದ್ದಾರೆ.
ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವು ಕಂದಹಾರ್ ವಿಮಾನ ಅಪಹರಣ, 2001ರ ಸಂಸತ್ತಿನ ದಾಳಿ ಮತ್ತು 26/11 ಮುಂಬೈ ದಾಳಿಯ ನಂತರ ಭಾರತದ ಗುಪ್ತಚರ ಸಂಸ್ಥೆಗಳು ನಡೆಸಿದ ಕಾರ್ಯಾಚರಣೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಸಂಜಯ್ ದತ್, ಅಕ್ಷಯ್ ಖನ್ನಾ, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಅಂತಹ ಘಟಾನುಘಟಿ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.
ಯಶಸ್ವಿ ಮೊದಲ ಭಾಗದ ನಂತರ ಈಗ ಎಲ್ಲರ ಕಣ್ಣು ಮಾರ್ಚ್ 19 ರಂದು ಬಿಡುಗಡೆಯಾಗಲಿರುವ ‘ಧುರಂಧರ್: ದಿ ರಿವೆಂಜ್’ ಮೇಲೆ ನೆಟ್ಟಿದೆ. ಸದ್ಯಕ್ಕೆ ‘ಟಾಕ್ಸಿಕ್’ ಚಿತ್ರದ ಟೀಸರ್ ನೀಡಿದ್ದ ಕಿಕ್ ಮಾದರಿಯಲ್ಲೇ ಈ ಚಿತ್ರವೂ ಇರಲಿದೆ ಎಂಬ ನಿರೀಕ್ಷೆ ಮೂಡಿದೆ.


