ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕಲ್ಕಿ 2898 ಎಡಿ’ ಬಳಿಕ ಪ್ರಭಾಸ್ ಮತ್ತೆ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡಿರುವ ಚಿತ್ರ ‘ರಾಜಾ ಸಾಬ್’. ಹಾರರ್–ಕಾಮಿಡಿ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಬಿಡುಗಡೆಯ ಮೊದಲ ದಿನವೇ ಗಮನ ಸೆಳೆದಿದೆ. ವಿಮರ್ಶೆಗಳು ಮಿಶ್ರವಾಗಿದ್ದರೂ, ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ಚಿತ್ರತಂಡಕ್ಕೆ ಸ್ವಲ್ಪ ನೆಮ್ಮದಿ ತಂದಿದೆ.
ಪ್ರಭಾಸ್ ಕಥೆ ಆಯ್ಕೆ ವಿಚಾರದಲ್ಲಿ ಎಚ್ಚರಿಕೆ ವಹಿಸುವ ನಟ. ‘ರಾಜಾ ಸಾಬ್’ಗೆ ಅವರು ಒಪ್ಪಿಕೊಂಡಾಗಲೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿತ್ತು. ಆದರೆ ಸಿನಿಮಾ ಬಿಡುಗಡೆಯಾದ ಬಳಿಕ ಸಾಕಷ್ಟು ನಕಾರಾತ್ಮಕ ಪ್ರತಿಕ್ರಿಯೆಗಳು ಕೇಳಿಬಂದಿವೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಚಿತ್ರ ನಿಲ್ಲಲಿಲ್ಲ ಎನ್ನುವ ಮಾತುಗಳು ಹರಿದಾಡುತ್ತಿವೆ.
ಇದನ್ನೂ ಓದಿ: FOOD | ರುಚಿ ರುಚಿಯಾದ ಆಲೂ ಬೋಂಡಾ ರೆಸಿಪಿ ಬೇಕಾ? ಇಲ್ಲಿದೆ ನೋಡಿ
ಆದರೂ ಮೊದಲ ದಿನ ಚಿತ್ರ ಉತ್ತಮ ಗಳಿಕೆ ಮಾಡಿದೆ. ಬಿಡುಗಡೆಯ ದಿನವೇ ‘ರಾಜಾ ಸಾಬ್’ ಸುಮಾರು 45 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಪ್ರೀಮಿಯರ್ ಶೋಗಳಿಂದಲೇ 9.15 ಕೋಟಿ ರೂ. ಆದಾಯ ಬಂದಿದೆ. ಒಟ್ಟು ಮೊದಲ ದಿನದ ಗಳಿಕೆ ಸುಮಾರು 54 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಚಿತ್ರವನ್ನು ಏಕೆ ಆಯ್ಕೆ ಮಾಡಿಕೊಂಡಿರಿ ಎಂಬ ಪ್ರಶ್ನೆಗೆ ಪ್ರಭಾಸ್, “ನಾನು ಕಾಮಿಡಿ ಸಿನಿಮಾಗಳನ್ನೂ ಮಾಡಬಲ್ಲೆ ಎಂಬುದನ್ನು ತೋರಿಸಲು ಈ ಪ್ರಯೋಗ” ಎಂದು ಹೇಳಿದ್ದರು. ಆದರೆ ಈ ಪ್ರಯತ್ನ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೇಗೆ ಸಾಗುತ್ತದೆ ಎಂಬುದು ಕಾದು ನೋಡಬೇಕಿದೆ.

