ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ದಿಗ್ಗಜ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಮ್ಮ ಮಹತ್ವಾಕಾಂಕ್ಷೆಯ ಸಿನಿಮಾ ‘ಲವ್ ಆ್ಯಂಡ್ ವಾರ್’ ಬಿಡುಗಡೆ ದಿನಾಂಕವನ್ನು ಅಂತಿಮಗೊಳಿಸಿದ್ದಾರೆ. ಭರ್ಜರಿ ತಾರಾಗಣವಿರುವ ಈ ಬಹುನಿರೀಕ್ಷಿತ ಚಿತ್ರವು 2026ರ ಆಗಸ್ಟ್ 14 ರಂದು ಸ್ವಾತಂತ್ರ್ಯೋತ್ಸವದ ವಿಶೇಷವಾಗಿ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ.
ದಿನಾಂಕ ಬದಲಾವಣೆಗೆ ಕಾರಣವೇನು?
ಈ ಮೊದಲು ‘ಲವ್ ಆ್ಯಂಡ್ ವಾರ್’ ಚಿತ್ರವನ್ನು 2026ರ ಮಾರ್ಚ್ 20 ರಂದು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿತ್ತು. ಆದರೆ, ಕೆಜಿಎಫ್ ಸ್ಟಾರ್ ಯಶ್ ನಟನೆಯ, ಗೀತು ಮೋಹನ್‌ದಾಸ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’, ಮಾರ್ಚ್ 19, 2026 ರಂದು ಬಿಡುಗಡೆಯಾಗಲಿದೆ. ಬಾಕ್ಸ್ ಆಫೀಸ್‌ನಲ್ಲಿ ಈ ಎರಡು ದೊಡ್ಡ ಸಿನಿಮಾಗಳ ನಡುವೆ ನೇರ ಹಣಾಹಣಿ ತಪ್ಪಿಸುವ ಉದ್ದೇಶದಿಂದ ನಿರ್ದೇಶಕ ಬನ್ಸಾಲಿ ಅವರು ತಮ್ಮ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದಾರೆ ಎಂದು ಹೇಳಲಾಗಿದೆ.
ತಾರಾಗಣ ಮತ್ತು ಚಿತ್ರೀಕರಣ
2022ರಲ್ಲಿ ತೆರೆಕಂಡ ಬಯೋಗ್ರಫಿಕಲ್ ಕ್ರೈಮ್ ಡ್ರಾಮಾ ‘ಗಂಗೂಬಾಯಿ ಕಾತಿಯಾವಾಡಿ’ ಚಿತ್ರದ ಯಶಸ್ಸಿನ ಬಳಿಕ ಸಂಜಯ್ ಲೀಲಾ ಬನ್ಸಾಲಿ ಅವರು ‘ಲವ್ ಆ್ಯಂಡ್ ವಾರ್’ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸ್ಟಾರ್ ಕಲಾವಿದರ ದಂಡೇ ಇದ್ದು, ನಟಿ ಆಲಿಯಾ ಭಟ್, ನಟರಾದ ರಣಬೀರ್ ಕಪೂರ್ ಮತ್ತು ವಿಕ್ಕಿ ಕೌಶಾಲ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

