March 4, 2026
Wednesday, March 4, 2026
spot_img

CINE | ಕ್ರೈಂ ಕಥೆ ‘ಮ್ಯಾಂಗೋ ಪಚ್ಚ’ಗೆ ಬಂಪರ್ ಡೀಲ್! ಆಡಿಯೋ ರೈಟ್ಸ್ ಸರೆಗಮ ಪಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಕಿಚ್ಚ ಸುದೀಪ್ ಅವರ ಅಕ್ಕನ ಪುತ್ರ ಸಂಚಿತ್ ಸಂಜೀವ್ ಅವರು ‘ಮ್ಯಾಂಗೋ ಪಚ್ಚ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಅದ್ದೂರಿ ಪ್ರವೇಶ ಮಾಡುತ್ತಿದ್ದಾರೆ. ವಿವೇಕ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕ್ರೈಂ ಥ್ರಿಲ್ಲರ್ ಸಿನಿಮಾ ಈಗಾಗಲೇ ಟೀಸರ್ ಮೂಲಕ ಪ್ರೇಕ್ಷಕರ ವಲಯದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಇದೀಗ, ಹೊಸಬರ ಈ ಪ್ರಯತ್ನಕ್ಕೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿಯಾಗಿದ್ದು, ಚಿತ್ರದ ಆಡಿಯೋ ಹಕ್ಕುಗಳು ಪ್ರಖ್ಯಾತ ಸರೆಗಮ ಕಂಪನಿಯ ಪಾಲಾಗಿವೆ.

ಹೊಸ ನಾಯಕ ಮತ್ತು ಹೊಸ ನಿರ್ದೇಶಕರ ಮೊದಲ ಪ್ರಯತ್ನವಾದರೂ, ‘ಮ್ಯಾಂಗೋ ಪಚ್ಚ’ ಚಿತ್ರದ ಆಡಿಯೋ ಹಕ್ಕುಗಳನ್ನು ಸರೆಗಮ ಒಂದು ಒಳ್ಳೆಯ ಮೊತ್ತಕ್ಕೆ ಖರೀದಿಸಿದೆ. ಈ ಬಂಪರ್ ಡೀಲ್ ಇಡೀ ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ.

2001 ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ನೈಜ ಪ್ರಮುಖ ಘಟನೆಗಳ ಹಿನ್ನೆಲೆಯನ್ನು ಈ ಕ್ರೈಂ ಥ್ರಿಲ್ಲರ್ ಕಥೆಯು ಹೊಂದಿದೆ. ಚಿತ್ರಕ್ಕೆ ಕೆಆರ್‌ಜಿ ಪ್ರೊಡಕ್ಷನ್ಸ್ ಮತ್ತು ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ಬಂಡವಾಳ ಹೂಡಿವೆ. ಪ್ರಿಯಾ ಸುದೀಪ್, ಕಾರ್ತಿಕ್ ಹಾಗೂ ಯೋಗಿ ಜಿ. ರಾಜ್ ಅವರು ಚಿತ್ರದ ನಿರ್ಮಾಪಕರಾಗಿದ್ದಾರೆ. ಜನಪ್ರಿಯ ಸಂಗೀತ ನಿರ್ದೇಶಕ ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಪ್ರಿಯಾ ಸುದೀಪ್ ಸಂತಸ:

ಆಡಿಯೋ ಹಕ್ಕು ಉತ್ತಮ ಮೊತ್ತಕ್ಕೆ ಸೇಲ್ ಆಗಿರುವ ಬಗ್ಗೆ ನಿರ್ಮಾಪಕಿ ಪ್ರಿಯಾ ಸುದೀಪ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. “ಸರೆಗಮ ನಮ್ಮ ‘ಮ್ಯಾಂಗೋ ಪಚ್ಚ’ ಚಿತ್ರದ ಆಡಿಯೋ ಖರೀದಿಸಿರುವುದು ನಮಗೆ ನಂಬಲಾಗದಷ್ಟು ಉತ್ಸಾಹ ತಂದಿದೆ. ಚರಣ್ ರಾಜ್ ಅವರು ಸಂಯೋಜಿಸಿರುವ ಸಂಗೀತವು ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತದೆ ಮತ್ತು ಚಿತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬುದು ನಮಗೆ ಖಚಿತವಾಗಿದೆ. ಚರಣ್ ಅವರ ಸಾಮರ್ಥ್ಯದ ಮೇಲೆ ನಮಗೆ ಅಪಾರ ನಂಬಿಕೆಯಿದೆ ಮತ್ತು ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡುಗಳನ್ನು ಕೇಳಲು ನಾನು ಉತ್ಸುಕಳಾಗಿದ್ದೇನೆ” ಎಂದು ಅವರು ಹಂಚಿಕೊಂಡಿದ್ದಾರೆ.

‘ಮ್ಯಾಂಗೋ ಪಚ್ಚ’ ಚಿತ್ರದ ಮೊದಲ ಹಾಡನ್ನು ಇದೇ ತಿಂಗಳ 24 ರಂದು ಬಿಡುಗಡೆ ಮಾಡಲು ಚಿತ್ರತಂಡ ಈಗಾಗಲೇ ಯೋಜನೆ ರೂಪಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !