ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಸೆಂಬರ್ 11ರಂದು ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಡೆವಿಲ್’ ಸಿನಿಮಾ ಈಗ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಆರಂಭದಲ್ಲಿ ಅಬ್ಬರಿಸಿದ್ದ ಈ ಚಿತ್ರಕ್ಕೆ ಈ ವಾರ ಎರಡು ಬಹುದೊಡ್ಡ ಸವಾಲುಗಳು ಎದುರಾಗಲಿವೆ. ಶಿವಣ್ಣ ಅಭಿನಯದ ‘45’ ಮತ್ತು ಮತ್ತೊಂದು ಬಹುನಿರೀಕ್ಷಿತ ಚಿತ್ರ ‘ಮಾರ್ಕ್’ ಬಿಡುಗಡೆಯಾಗುತ್ತಿರುವುದು ‘ಡೆವಿಲ್’ ಚಿತ್ರದ ಗಳಿಕೆಗೆ ಬ್ರೇಕ್ ಹಾಕುವ ಸಾಧ್ಯತೆ ದಟ್ಟವಾಗಿದೆ.
ಈಗಾಗಲೇ ಕುಸಿತ ಕಂಡಿರುವ ಸಿನಿಮಾದ ಕಲೆಕ್ಷನ್, ಹೊಸ ಸಿನಿಮಾಗಳ ಅಬ್ಬರದಲ್ಲಿ ಮತ್ತಷ್ಟು ತಳ ಸೇರುವ ಆತಂಕವಿದೆ. 45 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ಓಟಿಟಿ ಮತ್ತು ಟಿವಿ ಹಕ್ಕುಗಳಿಂದ ಒಂದಿಷ್ಟು ಆದಾಯ ಬಂದಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಲಾಭ ತಂದುಕೊಡುವುದು ನಿರ್ಮಾಪಕರಿಗೆ ಸದ್ಯದ ಮಟ್ಟಿಗೆ ಕಷ್ಟದ ಕೆಲಸವಾಗಿ ಕಾಣುತ್ತಿದೆ.
ನಟ ದರ್ಶನ್ ಜೈಲಿನಲ್ಲಿದ್ದರೂ, ಅವರ ಅಭಿಮಾನಿಗಳು ‘ಡೆವಿಲ್’ ಚಿತ್ರದ ಪ್ರಚಾರದ ಜವಾಬ್ದಾರಿಯನ್ನು ಹೊತ್ತು ಚಿತ್ರಕ್ಕೆ ಭರ್ಜರಿ ಆರಂಭವನ್ನೇ ನೀಡಿದ್ದರು. ಮೊದಲ ದಿನವೇ 10 ಕೋಟಿ ರೂಪಾಯಿ ಗಳಿಸಿದ್ದ ಸಿನಿಮಾ, ಸದ್ಯಕ್ಕೆ 33.26 ಕೋಟಿ ರೂಪಾಯಿ (ಗ್ರಾಸ್) ಕಲೆಕ್ಷನ್ ಮಾಡಿದೆ. ಆದರೆ, ಈ ವಾರ ಎರಡು ಭಿನ್ನ ಜಾನರ್‌ನ ಚಿತ್ರಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದರಿಂದ ‘ಡೆವಿಲ್’ ಓಟಕ್ಕೆ ತಡೆ ಬೀಳುವ ಸಾಧ್ಯತೆಯಿದೆ. ಅಭಿಮಾನಿಗಳ ಹೋರಾಟದ ನಡುವೆಯೂ ಸಿನಿಮಾದ ಲೈಫ್‌ಟೈಮ್ ಕಲೆಕ್ಷನ್ ಏರಿಕೆ ಕಾಣುವುದು ಸದ್ಯಕ್ಕೆ ಅನುಮಾನವಾಗಿ ಉಳಿದಿದೆ.

