March 29, 2026
Sunday, March 29, 2026
spot_img

CINE | ಬಾಕ್ಸ್ ಆಫೀಸ್ ಲೂಟಿ ಮಾಡ್ತಿದೆ ‘ಧುರಂಧರ್ 2’: 10 ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧುರಂಧರ್ 2 ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಟ ಮುಂದುವರಿಸಿದ್ದು, ಬಿಡುಗಡೆಯಾದ ಕೇವಲ 10 ದಿನಗಳಲ್ಲಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ರಣವೀರ್ ಸಿಂಗ್ ಅಭಿನಯ ಮತ್ತು ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

10ನೇ ದಿನವಾದ ಮಾರ್ಚ್ 28ರಂದು ಮಾತ್ರವೇ ಈ ಚಿತ್ರ ಸುಮಾರು 62.85 ಕೋಟಿ ರೂ. ಗಳಿಸಿದ್ದು, ಭಾರತದಲ್ಲಿನ ಒಟ್ಟು ಕಲೆಕ್ಷನ್ 784 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಈ ಮೂಲಕ ಹಿಂದಿ ಚಿತ್ರರಂಗದಲ್ಲಿ ಎರಡನೇ ಶನಿವಾರ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಹೊಸ ದಾಖಲೆ ನಿರ್ಮಿಸಿದೆ. ಈ ಹಿಂದೆ ಇದೇ ದಾಖಲೆ ಮೊದಲ ಭಾಗದ ‘ಧುರಂಧರ್’ ಸಿನಿಮಾದ ಹೆಸರಿನಲ್ಲಿತ್ತು.

ಇದೇ ವೇಳೆ ಪುಷ್ಪ 2, ಬಾಹುಬಲಿ 2, ಗದರ್ 2, ದಂಗಲ್ ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳ 10ನೇ ದಿನದ ಗಳಿಕೆಯನ್ನು ಕೂಡ ಈ ಸಿನಿಮಾ ಹಿಂದಿಕ್ಕಿದೆ.

ಇದನ್ನೂ ಓದಿ:

ಜಾಗತಿಕ ಮಟ್ಟದಲ್ಲೂ ‘ಧುರಂಧರ್ 2’ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಒಟ್ಟು 1,151 ಕೋಟಿ ರೂ. ಕಲೆಕ್ಷನ್ ಮಾಡಿದೆ. ವಿದೇಶಿ ಮಾರುಕಟ್ಟೆಯಿಂದಲೇ ಸುಮಾರು 296 ಕೋಟಿ ರೂ. ಬಂದಿದೆ. ಸುಮಾರು 250–300 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಈಗಾಗಲೇ ಭಾರೀ ಲಾಭ ಗಳಿಸಿ ಬ್ಲಾಕ್‌ಬಸ್ಟರ್ ಹಾದಿಯಲ್ಲಿ ಸಾಗುತ್ತಿದೆ.

ಸಂಜಯ್ ದತ್, ಅರ್ಜುನ್ ರಾಮ್‌ಪಾಲ್ ಮತ್ತು ಆರ್. ಮಾಧವನ್ ಸೇರಿದಂತೆ ತಾರಾಗಣದ ಬಲವೂ ಚಿತ್ರದ ಯಶಸ್ಸಿಗೆ ಕಾರಣವಾಗಿದೆ.

ಒಟ್ಟಿನಲ್ಲಿ, ಈ ಚಿತ್ರದ ವೇಗವನ್ನು ನೋಡಿದರೆ 800 ಕೋಟಿ ಗಡಿಯನ್ನು ಶೀಘ್ರದಲ್ಲೇ ದಾಟುವ ಸಾಧ್ಯತೆ ಇದ್ದು, ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ನಾಗಾಲೋಟ ಮುಂದುವರಿಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !