ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಬ್ ಶೆಟ್ಟಿ ಅವರ ಬಹುನಿರೀಕ್ಷಿತ ಚಿತ್ರ ಕಾಂತಾರ ಚಾಪ್ಟರ್-1 ಎರಡನೇ ವಾರಾಂತ್ಯದ ನಂತರವೂ ಬಾಕ್ಸಾಫೀಸ್‌ನಲ್ಲಿ ತನ್ನ ಅಬ್ಬರವನ್ನು ಮುಂದುವರೆಸಿದೆ. ಅದರಲ್ಲೂ ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳಲ್ಲಿ ಚಿತ್ರದ ಕಲೆಕ್ಷನ್ ಕುಗ್ಗಿಲ್ಲ. ಇಲ್ಲಿಯವರೆಗೂ ಕಾಂತಾರ ಚಾಪ್ಟರ್-1 ನ ಹಿಂದಿ ಅವತರಣಿಕೆ ₹160 ಕೋಟಿಗೂ ಅಧಿಕ ಗಳಿಕೆ ಮಾಡಿದೆ.
ಸದ್ಯಕ್ಕೆ ಬಾಲಿವುಡ್‌ನಲ್ಲಿ ಕಾಂತಾರದ ಓಟಕ್ಕೆ ಅಡ್ಡಪಡಿಸುವಂಥಾ ದೊಡ್ಡ ಚಿತ್ರ ಯಾವುದೂ ಇಲ್ಲ. ಆದರೆ, ಇದೇ ಅಕ್ಟೋಬರ್ 21ರಂದು ದೀಪಾವಳಿ ಹಬ್ಬದ ದಿನ ಮಲ್ಟಿಸ್ಟಾರರ್ ಸಿನಿಮಾ ‘ಥಾಮಾ’ ಬಿಡುಗಡೆಯಾಗುತ್ತಿದ್ದು, ಇದು ಕಾಂತಾರದ ಓಟಕ್ಕೆ ಬ್ರೇಕ್ ಹಾಕುವ ಸಾಧ್ಯತೆ ಇದೆ ಎಂದು ಬಿ-ಟೌನ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಥಾಮಾ ಚಿತ್ರದ ಬಗ್ಗೆ ಈಗಾಗಲೇ ದೊಡ್ಡ ಕ್ರೇಜ್ ಸೃಷ್ಟಿಯಾಗಿದೆ.
ಗುರು-ಶಿಷ್ಯೆಯ ಬಾಕ್ಸಾಫೀಸ್ ಫೈಟ್: ರಿಷಬ್ ಶೆಟ್ಟಿ V/S ರಶ್ಮಿಕಾ ಮಂದಣ್ಣ
ಥಾಮಾ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಿದ್ದು, ಬೇತಾಳದ ಅವತಾರದಲ್ಲಿ ಹಿಂದೆಂದಿಗಿಂತಲೂ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದು ಮ್ಯಾಡಕ್ ಹಾರರ್ ಯೂನಿವರ್ಸ್‌ನ ಹೊಸ ಹಾರರ್ ಕಾಮಿಡಿ ಚಿತ್ರವಾಗಿದ್ದು, ಟೀಸರ್ ಮತ್ತು ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ.
ಆದರೆ, ಈ ಬಾಕ್ಸಾಫೀಸ್ ಫೈಟ್ ಒಂದು ವಿಶೇಷ ತಿರುವನ್ನು ಪಡೆದುಕೊಂಡಿದೆ. ರಶ್ಮಿಕಾ ಮಂದಣ್ಣ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ರಿಷಬ್ ಶೆಟ್ಟಿ ಅವರೇ. ಶೆಟ್ಟರ ನಿರ್ದೇಶನದ ಕಿರಿಕ್ ಪಾರ್ಟಿ ಚಿತ್ರದ ‘ಸಾನ್ವಿ’ ಪಾತ್ರದ ಮೂಲಕ ರಶ್ಮಿಕಾ ಸಿನಿದುನಿಯಾಗೆ ಕಾಲಿಟ್ಟರು. ನಂತರದ ದಿನಗಳಲ್ಲಿ ರಶ್ಮಿಕಾ ಖ್ಯಾತಿಯ ಉತ್ತುಂಗಕ್ಕೇರಿದಾಗ, ತಮ್ಮನ್ನು ಪರಿಚಯಿಸಿದ ನಿರ್ಮಾಣ ಸಂಸ್ಥೆ ಬಗ್ಗೆ ಹೇಳಲು ಹಿಂಜರಿದ್ದಕ್ಕೆ ರಿಷಬ್ ಟಾಂಗ್ ನೀಡಿದ್ದರು. ಈ ಕಾರಣಕ್ಕೆ ಇಬ್ಬರ ನಡುವೆ ಆಗಾಗ ಪರೋಕ್ಷ ಗುದ್ದಾಟ ನಡೆದಿದೆ.
ಕಥೆಯಲ್ಲೂ ಕಾಂಪಿಟೇಷನ್: ದೈವ ಮತ್ತು ದೆವ್ವದ ಹೋರಾಟ
ಈಗ ಆ ಪೈಪೋಟಿ ನೇರವಾಗಿ ಬಾಕ್ಸಾಫೀಸ್ ಅಖಾಡದಲ್ಲಿ ನಡೆಯಲಿದೆ. ಕಾಂತಾರ ಚಿತ್ರ ದೈವದ ಕಥೆಯಾಗಿದ್ದರೆ, ರಶ್ಮಿಕಾ ಅಭಿನಯದ ಥಾಮಾ ಚಿತ್ರ ದೆವ್ವದ ಕಥೆ. ಹೀಗೆ ದೈವ – ದೆವ್ವದ ಕಥಾಹಂದರ ಹೊಂದಿರುವ ಚಿತ್ರಗಳ ನಡುವೆ ಈ ದೀಪಾವಳಿಗೆ ಫೈಟ್ ನಡೆಯಲಿದೆ.
ಥಾಮಾ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಉತ್ತಮ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಆದಾಗ್ಯೂ, ಕಾಂತಾರ ಚಾಪ್ಟರ್-1 ಈಗಾಗಲೇ ಎರಡು ವಾರ ಪೂರೈಸಿ ಗೆಲುವಿನ ನಗೆ ಬೀರಿದೆ. ದೀಪಾವಳಿ ವೇಳೆಗೆ ಕಾಂತಾರದ ಕಲೆಕ್ಷನ್ ಸ್ವಲ್ಪ ಕಡಿಮೆಯಾಗಬಹುದು. ಆದರೆ, ಹೊಸದಾಗಿ ಬಿಡುಗಡೆಯಾಗುತ್ತಿರುವ ಥಾಮಾ ಚಿತ್ರ ಕಾಂತಾರ ಚಾಪ್ಟರ್-1 ನ ಒಟ್ಟು ಗಳಿಕೆಯ ಹತ್ತಿರ ಬರಲು ಕಷ್ಟವಾಗಬಹುದು ಎಂದು ಬಾಕ್ಸಾಫೀಸ್ ತಜ್ಞರು ವಿಶ್ಲೇಷಿಸಿದ್ದಾರೆ.
ಈ ದೀಪಾವಳಿಗೆ ಪ್ರೇಕ್ಷಕರು ‘ದೈವ’ಕ್ಕೆ ಮಣೆ ಹಾಕುತ್ತಾರೋ ಅಥವಾ ‘ದೆವ್ವ’ಕ್ಕೆ ಮನಸೋಲುತ್ತಾರೋ ಎಂಬುದು ಸದ್ಯದ ಕುತೂಹಲ.