ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಒಬ್ಬ ನಟ ಅಥವಾ ನಟಿ ಒಂದೇ ದಿನ ಎರಡು ಸಿನಿಮಾಗಳೊಂದಿಗೆ ಪ್ರೇಕ್ಷಕರ ಮುಂದೆ ಬರುವುದು ಅಪರೂಪ. ಆದರೆ ಜನವರಿ 23ರಂದು ರಚಿತಾ ರಾಮ್ ಅಭಿಮಾನಿಗಳಿಗೆ ಡಬಲ್ ಟ್ರೀಟ್ ಸಿಗಲಿದೆ. ರಚಿತಾ ನಟನೆಯ ಎರಡು ವಿಭಿನ್ನ ಶೈಲಿಯ ಸಿನಿಮಾಗಳು ಒಂದೇ ದಿನ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಸಿನಿಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.
ಝಯಿದ್ ಖಾನ್ ಅಭಿನಯದ ‘ಕಲ್ಟ್’ ಸಿನಿಮಾದಲ್ಲಿ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಬನಾರಸ್’ ಚಿತ್ರದ ಬಳಿಕ ಝಯಿದ್ ಒಪ್ಪಿಕೊಂಡ ಈ ಚಿತ್ರಕ್ಕೆ ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಜನವರಿ 16ರಂದು ಬಿಡುಗಡೆಯಾದ ಟ್ರೇಲರ್ ಸಾಕಷ್ಟು ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ರಚಿತಾ ರಾಮ್ ಎರಡು ವಿಭಿನ್ನ ಶೇಡ್‌ಗಳ ಪಾತ್ರದಲ್ಲಿ ನಟಿಸಿದ್ದು, ಟ್ರೇಲರ್‌ನಲ್ಲಿ ಒಂದೇ ಮುಖವನ್ನಷ್ಟೇ ತೋರಿಸಲಾಗಿದೆ. ಉಳಿದ ಅಚ್ಚರಿ ಸಿನಿಮಾದಲ್ಲೇ ಗೊತ್ತಾಗಲಿದೆ ಎನ್ನುವುದು ಚಿತ್ರತಂಡದ ಮಾತು.
ಇನ್ನೊಂದೆಡೆ ದುನಿಯಾ ವಿಜಯ್ ಮತ್ತು ರಾಜ್ ಬಿ ಶೆಟ್ಟಿ ಅಭಿನಯದ ‘ಲ್ಯಾಂಡ್‌ಲಾರ್ಡ್’ ಚಿತ್ರವೂ ಜನವರಿ 23ರಂದು ಬಿಡುಗಡೆಯಾಗುತ್ತಿದೆ. ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಈ ಸಿನಿಮಾ ಅಳಿದು ಉಳಿದವರ ಬದುಕಿನ ಕಥೆಯನ್ನು ಹೇಳುತ್ತದೆ. ಹೇಮಂತ್ ಗೌಡ ಕೆಎಸ್ ಸಂಗೀತ ನೀಡಿದ್ದು, ಸತ್ಯ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾದ ಟೀಸರ್‌ಗಳು ನಿರೀಕ್ಷೆ ಮೂಡಿಸಿವೆ.
ಒಂದೇ ದಿನ ಎರಡು ಸಿನಿಮಾಗಳಲ್ಲಿ ಸಂಪೂರ್ಣ ವಿಭಿನ್ನ ಪಾತ್ರಗಳಲ್ಲಿ ರಚಿತಾ ರಾಮ್ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ವಿಶೇಷ ಉಡುಗೊರೆಯಾಗಿದೆ.


