Sunday, November 2, 2025

CINE | ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನ 3ನೇ ಚಿತ್ರದ ಫಸ್ಟ್ ಲುಕ್ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ಲಾಕ್ ಬಸ್ಟರ್ ಹಿಟ್ ‘ಹನುಮಾನ್’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿರುವ ನಿರ್ದೇಶಕ ಪ್ರಶಾಂತ್ ವರ್ಮಾ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಜೈ ಹನುಮಾನ್’ ಸೇರಿದಂತೆ ಬಾಲಕೃಷ್ಣ ಅವರ ಪುತ್ರ ಮೋಕ್ಷಜ್ಞ ಅವರ ಲಾಂಚಿಂಗ್ ಸಿನಿಮಾದ ಜವಾಬ್ದಾರಿಯನ್ನೂ ಹೊತ್ತಿರುವ ಪ್ರಶಾಂತ್ ವರ್ಮಾ, ಇದೀಗ ತಮ್ಮ ಸೂಪರ್‌ಹೀರೋ ಯೂನಿವರ್ಸ್‌ನ ಮೂರನೇ ಚಿತ್ರವನ್ನು ಘೋಷಿಸಿದ್ದಾರೆ.

‘ಮಹಾಕಾಳಿ’ಗೆ ಕನ್ನಡದ ಭೂಮಿ ಶೆಟ್ಟಿ ನಾಯಕಿ

ವಿಶೇಷವೆಂದರೆ, ಈ ಬಾರಿ ಪ್ರಶಾಂತ್ ವರ್ಮಾ ಅವರು ಮಹಿಳಾ ಸೂಪರ್‌ ಹೀರೋ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ‘ಮಹಾಕಾಳಿ’ ಎಂದು ಶೀರ್ಷಿಕೆ ಇಡಲಾಗಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕನ್ನಡದ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಭೂಮಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಕುಂದಾಪುರದ ಹುಡುಗಿಯಾದ ಭೂಮಿ ಶೆಟ್ಟಿ ಅವರು ಈ ಸಿನಿಮಾದಲ್ಲಿ ದೈವಿಕ ‘ಮಹಾಕಾಳಿ’ಯ ಅವತಾರ ಎತ್ತಿರುವುದು ವಿಶೇಷ.

ವೈರಲ್ ಆಯ್ತು ಫಸ್ಟ್ ಲುಕ್ ಪೋಸ್ಟರ್!

‘ಮಹಾಕಾಳಿ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪೋಸ್ಟರ್‌ನಲ್ಲಿ ಭೂಮಿ ಶೆಟ್ಟಿ ಅವರ ಮುಖವನ್ನು ಕೆಂಪು ಮತ್ತು ಬಂಗಾರದ ಬಣ್ಣದಿಂದ ಅಲಂಕರಿಸಲಾಗಿದ್ದು, ಸಾಂಪ್ರದಾಯಿಕ ಆಭರಣಗಳೊಂದಿಗೆ ದೈವಿಕ ಅನುಭವ ನೀಡುವ ಗೆಟಪ್‌ನಲ್ಲಿ ಅವರು ಕಣ್ಸೆಳೆದಿದ್ದಾರೆ.

ಲೇಡಿ ಡೈರೆಕ್ಟರ್ ಆ್ಯಕ್ಷನ್-ಕಟ್

‘ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್’ ಅಡಿಯಲ್ಲಿ ಬರುತ್ತಿರುವ ಈ ‘ಮಹಾಕಾಳಿ’ ಚಿತ್ರಕ್ಕೆ ಪ್ರಶಾಂತ್ ವರ್ಮಾ ಅವರು ಕಥೆ ಬರೆದಿದ್ದಾರೆ. ಆದರೆ, ಆ್ಯಕ್ಷನ್-ಕಟ್ ಹೇಳುವ ಜವಾಬ್ದಾರಿಯನ್ನು ಲೇಡಿ ಡೈರೆಕ್ಟರ್ ಪೂಜಾ ಅಪರ್ಣಾ ಕೊಲ್ಲೂರು ಹೊತ್ತಿದ್ದಾರೆ. ಈ ಹಿಂದೆ ಇವರು ‘ಮಾರ್ಟಿನ್ ಲೂಥರ್ ಕಿಂಗ್’ ಚಿತ್ರವನ್ನು ನಿರ್ದೇಶಿಸಿದ್ದರು.

ಕಥೆಯ ಹಿನ್ನೆಲೆ:

ಪಶ್ಚಿಮ ಬಂಗಾಳದ ಜನಪ್ರಿಯ ದೇವಿ ಕಾಳಿಯ ಹಿನ್ನೆಲೆಯಲ್ಲಿ, ಅಲ್ಲಿನ ನೆಲದ ಸಂಸ್ಕೃತಿಯನ್ನು ಆಧರಿಸಿ ಈ ಸೂಪರ್ ಹೀರೋ ಕಥೆಯನ್ನು ಕಟ್ಟಿಕೊಡಲಾಗುತ್ತದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

error: Content is protected !!