ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿಂಗ್ ಸ್ಟಾರ್ ಯಶ್ ನಟನೆಯ, ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಈಗಿನಿಂದಲೇ ಸಿನಿರಸಿಕರಲ್ಲಿ ಕುತೂಹಲದ ಕಿಚ್ಚು ಹಚ್ಚಿದೆ. ಚಿತ್ರತಂಡವು ಸಿನಿಮಾದ ಒಂದೊಂದೇ ಪಾತ್ರಗಳನ್ನು ಪರಿಚಯಿಸುವ ಮೂಲಕ ಪ್ರಚಾರದ ವೇಗವನ್ನು ಹೆಚ್ಚಿಸಿದೆ. ಈಗಾಗಲೇ ಕಿಯಾರಾ ಅಡ್ವಾಣಿ ಮತ್ತು ಹುಮಾ ಖುರೇಷಿ ಅವರ ಪಾತ್ರಗಳ ಕುರಿತು ಸುಳಿವು ನೀಡಿದ್ದ ಚಿತ್ರತಂಡ, ಈಗ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರ ಭರ್ಜರಿ ಲುಕ್ ಅನಾವರಣಗೊಳಿಸಿದೆ.

ಈ ಚಿತ್ರದಲ್ಲಿ ನಯನತಾರಾ ಅವರು ‘ಗಂಗಾ’ ಎಂಬ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ನಯನತಾರಾ ಅವರು ಕೈಯಲ್ಲಿ ಶಾಟ್ ಗನ್ ಹಿಡಿದು, ಅರಮನೆಯಂತಹ ಭವ್ಯವಾದ ಸೆಟ್‌ನಲ್ಲಿ ರಗಡ್ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಅವರ ಹಿಂಭಾಗದಲ್ಲಿ ವಿದೇಶಿ ಕಾವಲುಗಾರರು ನಿಂತಿದ್ದು, ಇದು ಸಿನಿಮಾದಲ್ಲಿ ಅವರ ಪಾತ್ರದ ಗಾಂಭೀರ್ಯ ಮತ್ತು ಮಾಸ್ ಎಲಿಮೆಂಟ್ ಹೇಗಿರಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಜನವರಿ 8ರಂದು ಯಶ್ ಅವರ ಜನ್ಮದಿನದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ ‘ಟಾಕ್ಸಿಕ್’ ಚಿತ್ರದ ಬಹುನಿರೀಕ್ಷಿತ ಟೀಸರ್ ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಟೀಸರ್ ಬಿಡುಗಡೆಗೂ ಮುನ್ನ ಸಿನಿಮಾದ ಪ್ರಮುಖ ಪಾತ್ರಗಳನ್ನು ಪರಿಚಯಿಸುವುದು ಚಿತ್ರತಂಡದ ಮಾಸ್ಟರ್ ಪ್ಲ್ಯಾನ್ ಆಗಿದ್ದು, ಪ್ರತಿ ಪೋಸ್ಟರ್‌ಗಳು ಕೂಡ ಅತ್ಯಂತ ಕಲರ್‌ಫುಲ್ ಆಗಿ ಮೂಡಿಬರುತ್ತಿವೆ.
ಮಲಯಾಳಂನ ಪ್ರತಿಭಾವಂತ ನಿರ್ದೇಶಕಿ ಗೀತು ಮೋಹನ್‌ದಾಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷವೆಂದರೆ, ಯಶ್ ಅವರೂ ಕೂಡ ಕಥೆ ಬರೆಯುವಲ್ಲಿ ಗೀತು ಅವರ ಜೊತೆ ಕೈಜೋಡಿಸಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ.
ಚಿತ್ರತಂಡ ಅಧಿಕೃತವಾಗಿ ಘೋಷಿಸಿರುವಂತೆ ಮಾರ್ಚ್ 19ರಂದು ಸಿನಿಮಾ ತೆರೆಕಾಣಲಿದೆ. ಈದ್ ಮತ್ತು ಯುಗಾದಿ ಹಬ್ಬಗಳ ರಜೆ ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಆದರೆ, ಅದೇ ಸಮಯದಲ್ಲಿ ಹಿಂದಿಯ ‘ಧುರಂಧರ್ 2’ ಸಿನಿಮಾ ಕೂಡ ಬಿಡುಗಡೆಯಾಗುತ್ತಿರುವುದರಿಂದ, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಹಣಾಹಣಿ ಏರ್ಪಡುವುದು ಖಚಿತವಾಗಿದೆ.

