February 11, 2026
Wednesday, February 11, 2026
spot_img

CINE | ಅದೃಶ್ಯ ನೊಣ, ಅದ್ಭುತ ನಟನೆ! ರಾಜಮೌಳಿ ಮೆಚ್ಚಿದ ಆ ವಿಲನ್ ಯಾರು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಸ್.ಎಸ್. ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು ಅಭಿನಯದ ‘ವಾರಣಾಸಿ’ ಸಿನಿಮಾ ಸದ್ಯ ಭಾರತೀಯ ಚಿತ್ರರಂಗದ ಮೋಸ್ಟ್ ಎಕ್ಸ್​ಪೆಕ್ಟೆಡ್ ಮೂವಿ. ಈ ಸಿನಿಮಾದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಖಳನಾಯಕನಾಗಿ ಅಬ್ಬರಿಸಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಹೇಶ್ ಬಾಬು, “ರಾಜಮೌಳಿಗೆ ನಾಯಕರಿಗಿಂತ ವಿಲನ್‌ಗಳೆಂದರೆ ಹೆಚ್ಚು ಪ್ರೀತಿ” ಎಂದು ಹಾಸ್ಯದ ಚಟಾಕಿ ಹಾರಿಸಿದ್ದರು. ಇದು ರಾಜಮೌಳಿ ಸೃಷ್ಟಿಸಿದ ಪವರ್‌ಫುಲ್ ವಿಲನ್ ಪಾತ್ರಗಳ ಬಗ್ಗೆ ಮತ್ತೆ ಚರ್ಚೆ ಆರಂಭವಾಗುವಂತೆ ಮಾಡಿದೆ.

ರಾಜಮೌಳಿ ಅವರ ಸಿನಿಮಾಗಳಲ್ಲಿ ನಾಯಕನಿಗಿಂತಲೂ ವಿಲನ್ ಪಾತ್ರಗಳು ಹೆಚ್ಚು ಪ್ರಭಾವಶಾಲಿಯಾಗಿರುತ್ತವೆ. ಆದರೆ, ಸ್ವತಃ ರಾಜಮೌಳಿ ಅವರೇ ಹಲವು ಬಾರಿ ಬಹಿರಂಗವಾಗಿ ಹೇಳಿಕೊಂಡಿರುವಂತೆ, ಅವರು ಸೃಷ್ಟಿಸಿದ ಎಲ್ಲಾ ಖಳನಾಯಕರ ಪೈಕಿ ಕಿಚ್ಚ ಸುದೀಪ್ ಅವರ ಪಾತ್ರ ಅವರಿಗೆ ಅತಿ ಹೆಚ್ಚು ಇಷ್ಟವಂತೆ. ‘ಆರ್​​ಆರ್​​ಆರ್’ ಯಶಸ್ಸಿನ ನಂತರ ಹಾಲಿವುಡ್‌ನಲ್ಲಿ ನಡೆದ ವಿಶೇಷ ಪ್ರದರ್ಶನದಲ್ಲೂ ರಾಜಮೌಳಿ ಸುದೀಪ್ ಅವರ ನಟನಾ ಕೌಶಲವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು.

ಸುದೀಪ್ ಅವರ ಪಾತ್ರ ಅಚ್ಚುಮೆಚ್ಚಾಗಲು ಕಾರಣವೇನೆಂದು ವಿವರಿಸಿದ ರಾಜಮೌಳಿ, ‘ಈಗ’ ಸಿನಿಮಾದ ಸವಾಲುಗಳನ್ನು ಸ್ಮರಿಸಿದ್ದಾರೆ. ಸಾಮಾನ್ಯವಾಗಿ ಎದುರಿಗೆ ಒಬ್ಬ ನಟ ಅಥವಾ ಕ್ಯಾಮೆರಾ ಇದ್ದರೆ ನಟಿಸುವುದು ಸುಲಭ. ಆದರೆ, ‘ಈಗ’ ಚಿತ್ರದಲ್ಲಿ ಸುದೀಪ್ ನಟಿಸಬೇಕಾಗಿದ್ದುದು ಕೇವಲ ಕಲ್ಪನೆಯಲ್ಲಿರುವ ಒಂದು ನೊಣದ ಎದುರು!

ಇದನ್ನೂ ಓದಿ:

“ನೊಣವು ಎತ್ತ ಸಾಗುತ್ತದೆ, ಅದು ಹೇಗೆ ವರ್ತಿಸುತ್ತದೆ ಎಂಬುದು ಕೇವಲ ನನ್ನ ಕಲ್ಪನೆಯಲ್ಲಿತ್ತು. ಸುದೀಪ್ ಅವರು ನನ್ನ ಕಲ್ಪನೆಯನ್ನು ಗ್ರಹಿಸಿ, ಎದುರಿಗೆ ಯಾವುದೂ ಇಲ್ಲದಿದ್ದರೂ ಅತ್ಯದ್ಭುತವಾಗಿ ಅಭಿನಯಿಸಿದರು. ಕೇವಲ ಗಾಳಿಯಲ್ಲಿ ನೊಣವನ್ನು ಊಹಿಸಿಕೊಂಡು ಅವರು ನೀಡಿದ ಎಕ್ಸ್‌ಪ್ರೆಶನ್‌ಗಳು ಅವರ ನಟನಾ ಶಕ್ತಿಗೆ ಸಾಕ್ಷಿ,” ಎಂದು ರಾಜಮೌಳಿ ಸುದೀಪ್ ಅವರ ಪ್ರತಿಭೆಯನ್ನು ಕೊಂಡಾಡಿದ್ದಾರೆ.

ಮಹೇಶ್ ಬಾಬು ಅವರ ‘ವಾರಣಾಸಿ’ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಅಂತಹ ಘಟಾನುಘಟಿ ನಟನಿದ್ದರೂ, ಸುದೀಪ್ ಅವರ ಆ ಐಕಾನಿಕ್ ನಟನೆಯನ್ನು ರಾಜಮೌಳಿ ಇಂದಿಗೂ ಬೆಸ್ಟ್ ಎಂದು ಪರಿಗಣಿಸುತ್ತಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !