ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಸೂಪರ್‌ಸ್ಟಾರ್ ದಳಪತಿ ವಿಜಯ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಜನ ನಾಯಕನ್’ ಮತ್ತೆ ಸುದ್ದಿಯಲ್ಲಿದೆ. ಜನವರಿ 9ಕ್ಕೆ ಬಿಡುಗಡೆಯಾಗಬೇಕಿದ್ದ ಈ ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸೆರ್ಟಿಫಿಕೇಶನ್ (CBFC) ಇನ್ನೂ ಪ್ರಮಾಣಪತ್ರ ನೀಡದ ಕಾರಣ, ಬಿಡುಗಡೆ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಈ ವಿಳಂಬದಿಂದ ಚಿತ್ರ ವಿತರಣೆ ಹಾಗೂ ಡಿಜಿಟಲ್ ಸ್ಟ್ರೀಮಿಂಗ್ ವೇಳಾಪಟ್ಟಿಗೆ ಭಾರಿ ಅಡಚಣೆ ಉಂಟಾಗಿದೆ.
ಚಿತ್ರದ ಡಿಜಿಟಲ್ ಹಕ್ಕುಗಳನ್ನು ಸುಮಾರು 120 ಕೋಟಿ ರೂ.ಗೆ ಅಮೆಜಾನ್ ಪ್ರೈಮ್ ವಿಡಿಯೋ ಖರೀದಿಸಿದೆ ಎನ್ನಲಾಗಿದ್ದು, ಬಿಡುಗಡೆ ದಿನಾಂಕ ನಿರಂತರವಾಗಿ ಮುಂದೂಡುತ್ತಿರುವುದರಿಂದ OTT ಪ್ಲಾಟ್‌ಫಾರ್ಮ್ ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ನಡೆಸುತ್ತಿದೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಈ ಕುರಿತು ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ.
ಈ ನಡುವೆ, ‘ಜನ ನಾಯಕನ್’ ಬಿಡುಗಡೆ ಸಂಬಂಧ ಮದ್ರಾಸ್ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಮಾಣಪತ್ರ ಪಡೆಯುವ ಮೊದಲು ಬಿಡುಗಡೆ ದಿನಾಂಕ ಘೋಷಿಸಿದ್ದನ್ನು CBFC ಪ್ರಶ್ನಿಸಿದೆ. ಕಟ್‌ಗಳ ಕುರಿತಂತೆ ಅಂತಿಮ ತೀರ್ಮಾನ ಇನ್ನೂ ಬಾಕಿಯಿದ್ದು, ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ.



