ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಚಿತ್ರರಂಗದ ಸ್ಟಾರ್ ನಟಿಯಾಗಿ ದಶಕಕ್ಕೂ ಹೆಚ್ಚು ಕಾಲ ಮೆರೆದ ಸಮಂತಾ ಋತ್ ಪ್ರಭು, ಇತ್ತೀಚೆಗೆ ತಮ್ಮ ಪಾತ್ರಗಳ ಆಯ್ಕೆಯ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಅವಕಾಶಗಳ ಕೊರತೆ, ಪಾತ್ರಗಳ ವೈವಿಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ, ಅವರು ನಟಿಸಿರುವ ‘ಮಾ ಇಂಟಿ ಬಂಗಾರಂ’ ಚಿತ್ರದ ಟೀಸರ್ ಇದೀಗ ಬಿಡುಗಡೆಯಾಗಿ ಭಾರೀ ಕುತೂಹಲ ಮೂಡಿಸಿದೆ. ಈ ಟೀಸರ್‌ನಲ್ಲಿ ಸಮಂತಾ ಅವರು ಒಂದೇ ಸಿನಿಮಾದೊಳಗೆ ಸಂಪೂರ್ಣ ಭಿನ್ನ ಸ್ವಭಾವದ ಎರಡು ಮುಖಗಳಲ್ಲಿ ಕಾಣಿಸಿಕೊಂಡಿದ್ದು, ಕಥೆಯ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಟೀಸರ್‌ನಲ್ಲಿ ಸಮಂತಾ ಮತ್ತು ಕನ್ನಡ ನಟ ದಿಗಂತ್ ಪ್ರೀತಿಸಿ ಕುಟುಂಬದರಿಗೆ ತಿಳಿಯದಂತೆ ಮದುವೆಯಾಗಿರುವ ಕಥೆ ಕಾಣಿಸುತ್ತದೆ. ಮದುವೆಯ ನಂತರ ಮೊದಲ ಬಾರಿ ಗಂಡನ ಮನೆಗೆ ಕಾಲಿಟ್ಟಿರುವ ಸಮಂತಾ, ಕೂಡು ಕುಟುಂಬದ ಸೊಸೆಯಾಗಿ ಎಲ್ಲರ ಮೆಚ್ಚುಗೆ ಪಡೆಯುವಂತೆ ನಗುಮುಖದಿಂದ, ಶಾಂತ ಸ್ವಭಾವದ ಗೌರಮ್ಮನಾಗಿ ಕಾಣಿಸುತ್ತಾರೆ. ಆದರೆ ಈ ಸಂಸ್ಕಾರಿತ ರೂಪ ಹಗಲು ಹೊತ್ತಿನವರೆಗೆ ಮಾತ್ರ ಎಂಬುದನ್ನು ಟೀಸರ್ ಸೂಚಿಸುತ್ತದೆ.
ಇದನ್ನೂ ಓದಿ: FOOD | ಸಿಂಪಲ್ ಆಗಿ ಮಾಡಿ ಆರೋಗ್ಯಕರ ಗಾರ್ಲಿಕ್ ಚಿಕನ್! ರೆಸಿಪಿ ಇಲ್ಲಿದೆ
ರಾತ್ರಿಯಾಗುತ್ತಿದ್ದಂತೆ ಸಮಂತಾ ಮತ್ತೊಂದು ಭೀಕರ ರೂಪ ತಾಳುತ್ತಾರೆ. ಸೀರೆಯಲ್ಲೇ ಕಾಳಿಯಂತೆ ವಿಲನ್‌ಗಳ ಮೇಲೆ ಹಾರಿ ಬೀಳುತ್ತಾ, ಭರ್ಜರಿ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಎಲ್ಲ ಘಟನೆಗಳು ಅತ್ತೆಯ ಮನೆಯಲ್ಲೇ ನಡೆಯುತ್ತಿರುವುದು ಕಥೆಗೆ ಇನ್ನಷ್ಟು ರಹಸ್ಯ ತುಂಬಿದೆ. ಸಮಂತಾರ ಈ ದ್ವಿವ್ಯಕ್ತಿತ್ವದ ಹಿಂದೆ ಇರುವ ಕಾರಣವೇನು ಎಂಬ ಪ್ರಶ್ನೆ ಮೂಡೋದು ಸಹಜ.
ಈ ಸಿನಿಮಾದಲ್ಲಿ ದಿಗಂತ್ ಪತಿ ಪಾತ್ರದಲ್ಲಿ ನಟಿಸಿದ್ದು, ಪ್ರಮುಖ ಪಾತ್ರದಲ್ಲಿ ಗುಲ್ಶನ್ ದೇವಯ್ಯ ಕಾಣಿಸಿಕೊಂಡಿದ್ದಾರೆ. ನಂದಿನಿ ರೆಡ್ಡಿ ನಿರ್ದೇಶನ ಮಾಡಿರುವ ಈ ಚಿತ್ರವನ್ನು ರಾಜ್ ನಿಧಿಮೋರು ನಿರ್ಮಿಸಿದ್ದಾರೆ. ಬಿಡುಗಡೆಯ ದಿನಾಂಕವನ್ನು ತಂಡ ಇನ್ನಷ್ಟೇ ಪ್ರಕಟಿಸಬೇಕಿದೆ.

