ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಲಿವುಡ್ ಅಂಗಳದಲ್ಲಿ ಸಂಚಲನ ಮೂಡಿಸಿರುವ ‘ಪರಾಶಕ್ತಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭ ಪಡೆದಿದೆ. ತಮಿಳು ನಟ ವಿಜಯ್ ಅವರ ‘ಜನ ನಾಯಗನ್’ ಸಿನಿಮಾ ಜನವರಿ 9ರಂದು ಬಿಡುಗಡೆಯಾಗಬೇಕಿತ್ತು, ಆದರೆ ಸೆನ್ಸಾರ್ ಮಂಡಳಿಯ ತಾಂತ್ರಿಕ ಕಾರಣಗಳಿಂದಾಗಿ ಸಿನಿಮಾ ರಿಲೀಸ್ ಮುಂದೂಡಲ್ಪಟ್ಟಿತು. ಇದರ ನೇರ ಲಾಭ ಶಿವಕಾರ್ತಿಕೇಯನ್ ಅಭಿನಯದ ‘ಪರಾಶಕ್ತಿ’ ಸಿನಿಮಾಗೆ ಸಿಕ್ಕಿದ್ದು, ಚಿತ್ರವು ವಿಶ್ವದಾದ್ಯಂತ ಭರ್ಜರಿ ಓಪನಿಂಗ್ ಪಡೆದಿದೆ.
ಸಿನಿಮಾ ವಿಮರ್ಶಕರ ಲೆಕ್ಕಾಚಾರದ ಪ್ರಕಾರ, ‘ಪರಾಶಕ್ತಿ’ ಸಿನಿಮಾ ಮೊದಲ ದಿನ ಭಾರತದಲ್ಲಿ 14 ಕೋಟಿ ರೂ. ಗಳಿಸಿದ್ದರೆ, ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಈ ಮೊತ್ತ 24 ಕೋಟಿ ರೂ. ದಾಟಿದೆ. ಶಿವಕಾರ್ತಿಕೇಯನ್ ಅವರ ಸಿನಿಮಾ ಕೆರಿಯರ್‌ನಲ್ಲಿ ಮೊದಲ ದಿನ ಇಷ್ಟು ದೊಡ್ಡ ಮೊತ್ತದ ಹಣ ಗಳಿಸಿರುವುದು ಇದೇ ಮೊದಲು ಎನ್ನಲಾಗುತ್ತಿದೆ.
ತಮಿಳುನಾಡಿನಲ್ಲಿ ದಶಕಗಳ ಹಿಂದೆ ನಡೆದ ‘ಹಿಂದಿ ಹೇರಿಕೆ’ ವಿರುದ್ಧದ ಹೋರಾಟವನ್ನು ಆಧರಿಸಿ ಸುಧಾ ಕೊಂಗರ ಈ ಚಿತ್ರ ನಿರ್ದೇಶಿಸಿದ್ದಾರೆ.
ಶಿವಕಾರ್ತಿಕೇಯನ್ ನಾಯಕನಾದರೆ, ಕನ್ನಡತಿ ಶ್ರೀಲೀಲಾ ನಾಯಕಿಯಾಗಿ ಮಿಂಚಿದ್ದಾರೆ. ವಿಶೇಷವೆಂದರೆ, ನಟ ಜಯಂ ರವಿ ಇಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ವಿಜಯ್ ಸಿನಿಮಾ ರೇಸ್‌ನಲ್ಲಿ ಇಲ್ಲದ ಕಾರಣ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ ಹೆಚ್ಚಿನ ಚಿತ್ರಮಂದಿರಗಳು ‘ಪರಾಶಕ್ತಿ’ ಪಾಲಾಗಿವೆ.
ಚಿತ್ರವು ಆರ್ಥಿಕವಾಗಿ ಯಶಸ್ವಿಯಾಗಿದ್ದರೂ, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರಕಥೆ ಇನ್ನೂ ಸ್ವಲ್ಪ ಗಟ್ಟಿಯಾಗಿರಬೇಕಿತ್ತು ಎಂಬುದು ಕೆಲವು ಸಿನಿಮಾ ಪ್ರೇಮಿಗಳ ಅಭಿಪ್ರಾಯ. ಇನ್ನು ಉತ್ತರ ಭಾರತದ ಕೆಲವರು ಈ ಸಿನಿಮಾ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, “ಈ ಚಿತ್ರವು ಉತ್ತರ ಭಾರತದವರ ಮೇಲೆ ದ್ವೇಷ ಬಿತ್ತುವಂತೆ ಬಿಂಬಿತವಾಗಿದೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿ ಕಾರಿದ್ದಾರೆ.
ಒಟ್ಟಾರೆಯಾಗಿ, ವಿಜಯ್ ಸಿನಿಮಾ ಬಿಡುಗಡೆಯಾಗದ ‘ಅದೃಷ್ಟ’ದ ಬೆಂಬಲ ಮತ್ತು ವಿವಾದಗಳ ನಡುವೆಯೂ ‘ಪರಾಶಕ್ತಿ’ ಮೊದಲ ದಿನ ದೊಡ್ಡ ಮಟ್ಟದ ಸದ್ದು ಮಾಡುವಲ್ಲಿ ಯಶಸ್ವಿಯಾಗಿದೆ.

