ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಧುರಂಧರ್’ ಹಾಗೂ ‘ಧುರಂಧರ್: ದಿ ರಿವೆಂಜ್’ ಸಿನಿಮಾಗಳ ಭರ್ಜರಿ ಯಶಸ್ಸಿನ ಬಳಿಕ ಬಾಲಿವುಡ್ ನಟ ಅರ್ಜುನ್ ರಾಮ್ಪಾಲ್ ಈಗ ಡಿಜಿಟಲ್ ಲೋಕಕ್ಕೆ ಲಗ್ಗೆ ಇಡಲು ಸಜ್ಜಾಗಿದ್ದಾರೆ. ಖ್ಯಾತ ನಿರ್ದೇಶಕ ಹನ್ಸಲ್ ಮೆಹ್ತಾ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಬಿಲಿಯನೇರ್’ ವೆಬ್ ಸರಣಿಯಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಸದ್ಯ ಈ ವಿಷಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ.
ಈ ಸರಣಿಯು ಒಬ್ಬ ಪ್ರಭಾವಿ ಉದ್ಯಮಿಯ ಮಹತ್ವಾಕಾಂಕ್ಷೆ, ಅಧಿಕಾರದ ಅಮಲು ಮತ್ತು ಯಶಸ್ಸಿನ ಹಿಂದಿರುವ ಕರಾಳ ಸತ್ಯಗಳನ್ನು ಅನಾವರಣಗೊಳಿಸಲಿದೆ. ಈ ಕಥೆಯು ಯುವ ಭಾರತದ ಉದ್ಯಮ ಲೋಕದ ಪ್ರತಿಬಿಂಬದಂತಿರಲಿದೆ ಎನ್ನಲಾಗುತ್ತಿದೆ.
ಸರಣಿಯ ಕಥಾಹಂದರವು ಭಾರತದ ಚರ್ಚಿತ ಉದ್ಯಮಿಗಳಾದ ವಿಜಯ್ ಮಲ್ಯ ಅಥವಾ ಲಲಿತ್ ಮೋದಿ ಅವರ ಜೀವನಕ್ಕೆ ಹತ್ತಿರವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ‘ಕಿಂಗ್ ಆಫ್ ಗುಡ್ ಟೈಮ್ಸ್’ ಎಂದೇ ಖ್ಯಾತರಾಗಿದ್ದ ಮಲ್ಯ ಅವರ ಐಷಾರಾಮಿ ಜೀವನ ಮತ್ತು ನಂತರದ ಕಾನೂನು ಸಂಘರ್ಷಗಳ ಎಳೆಗಳು ಇಲ್ಲಿರಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಚಿತ್ರತಂಡದ ಪ್ರಕಾರ ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ, ಬದಲಿಗೆ ಹಲವು ಉದ್ಯಮಿಗಳ ಜೀವನದ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಕಥೆಯಾಗಿರಲಿದೆ.
ಈ ಹಿಂದೆ ‘ಸ್ಕ್ಯಾಮ್’ ಸರಣಿಯ ಮೂಲಕ ನೈಜ ಘಟನೆಗಳನ್ನು ರೋಚಕವಾಗಿ ತೆರೆಗೆ ತಂದಿದ್ದ ಹನ್ಸಲ್ ಮೆಹ್ತಾ ಅವರು, ಈ ಬಾರಿ ‘ಬಿಲಿಯನೇರ್’ ಮೂಲಕ ಅಂತಹದ್ದೇ ಮೋಡಿ ಮಾಡಲು ಸಜ್ಜಾಗಿದ್ದಾರೆ. ಅರ್ಜುನ್ ರಾಮ್ಪಾಲ್ ಅವರು ಈ ಸರಣಿಯಲ್ಲಿ ಅತ್ಯಂತ ಗಂಭೀರ ಹಾಗೂ ಪವರ್ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಮನೆಮಾಡಿದೆ.



