ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸಿದ್ಧ ನಿರ್ದೇಶಕ ಎಸ್.ಎಸ್. ರಾಜಮೌಳಿ ಸದ್ಯ ತಮ್ಮ ಮಹತ್ವಾಕಾಂಕ್ಷೆಯ ‘ವಾರಣಾಸಿ’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಇದರ ನಡುವೆಯೇ ರಾಜಮೌಳಿ ಅವರು ಮತ್ತೊಂದು ಅಚ್ಚರಿಯ ವಿಷಯವನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.
ಇತ್ತೀಚೆಗೆ ಹಾಲಿವುಡ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಜಮೌಳಿ ಅವರು ಚಿತ್ರದ ಪ್ರಚಾರ ಮತ್ತು ಪ್ರಗತಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜಮೌಳಿ ಅವರ ಬ್ಲಾಕ್‌ಬಸ್ಟರ್ ಸಿನಿಮಾ ‘ಆರ್ಆರ್ಆರ್’ ಜಪಾನ್‌ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಅದೇ ಚಿತ್ರವನ್ನು ಅನಿಮೆ ರೂಪದಲ್ಲಿ ತರಲು ಜಪಾನ್‌ನ ಕೆಲವು ಪ್ರಮುಖ ಸ್ಟುಡಿಯೋಗಳ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮಾತುಕತೆಗಳು ಇನ್ನೂ ಆರಂಭಿಕ ಹಂತದಲ್ಲಿದ್ದು, ಯಾವುದೂ ಅಧಿಕೃತವಾಗಿ ಫೈನಲ್ ಆಗಿಲ್ಲ. ಒಂದೊಮ್ಮೆ ಈ ಪ್ರಾಜೆಕ್ಟ್ ಕಾರ್ಯರೂಪಕ್ಕೆ ಬಂದರೆ, ರಾಜಮೌಳಿ ಅವರು ಚಿತ್ರಕಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ತಂಡಕ್ಕೆ ನೆರವಾಗಲಿದ್ದಾರೆ.
ಸದ್ಯ ಶೂಟಿಂಗ್ ಹಂತದಲ್ಲಿರುವ ‘ವಾರಣಾಸಿ’ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮವು ಕೆಲವು ತಾಂತ್ರಿಕ ಅಡಚಣೆಗಳ ನಡುವೆಯೂ ಭಾರಿ ಯಶಸ್ಸು ಕಂಡಿತ್ತು. ಚಿತ್ರ ಬಿಡುಗಡೆಗೆ ಇನ್ನೂ ಒಂದು ವರ್ಷಕ್ಕೂ ಹೆಚ್ಚು ಸಮಯ ಬಾಕಿ ಇದ್ದರೂ, ಈಗಿನಿಂದಲೇ ಪ್ರಚಾರ ಕಾರ್ಯಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಶುರುವಾಗಿವೆ.



