ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದಲ್ಲಿ ಈಗ ‘ಧುರಂಧರ್’ ಸಿನಿಮಾದ್ದೇ ಹವಾ. ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಹಾಗೂ ಅಕ್ಷಯ್ ಖನ್ನಾ ಅಭಿನಯದ ‘ಧುರಂಧರ್’ ಚಿತ್ರವು 2025ರ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಕೀರ್ತಿಗೆ ಪಾತ್ರವಾಗಿದ್ದ ಕನ್ನಡದ ಹೆಮ್ಮೆಯ ಸಿನಿಮಾ ‘ಕಾಂತಾರ: ಚಾಪ್ಟರ್ 1’ ದಾಖಲೆಯನ್ನು ಈ ಸಿನಿಮಾ ಈಗ ಅಧಿಕೃತವಾಗಿ ಹಿಂದಿಕ್ಕಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ‘ಕಾಂತಾರ: ಚಾಪ್ಟರ್ 1’ ಜಾಗತಿಕವಾಗಿ ಸುಮಾರು 800 ಕೋಟಿ ರೂಪಾಯಿ ಗಳಿಸಿ ಈ ವರ್ಷದ ಟಾಪ್ ಸಿನಿಮಾವಾಗಿ ಹೊರಹೊಮ್ಮಿತ್ತು. ಆದರೆ, ಈಗ ಧುರಂಧರ್ ತನ್ನ ವಿಶ್ವಮಟ್ಟದ ಕಲೆಕ್ಷನ್‌ನಲ್ಲಿ 935 ಕೋಟಿ ರೂಪಾಯಿ ದಾಟುವ ಮೂಲಕ ಅಗ್ರಸ್ಥಾನಕ್ಕೇರಿದೆ. ಕೇವಲ ಭಾರತದಲ್ಲಿಯೇ 600 ಕೋಟಿ ರೂಪಾಯಿ ಬಾಚಿಕೊಂಡಿರುವ ಈ ಚಿತ್ರ, ಈ ವಾರಾಂತ್ಯದ ವೇಳೆಗೆ 1000 ಕೋಟಿ ರೂಪಾಯಿಗಳ ಭವ್ಯ ಕ್ಲಬ್ ಸೇರುವುದು ಬಹುತೇಕ ಖಚಿತವಾಗಿದೆ.
ವಿಶೇಷವೆಂದರೆ, ಈ ಸಿನಿಮಾ ಬಿಡುಗಡೆಯಾದಾಗ ಸಾಕಷ್ಟು ನೆಗೆಟಿವ್ ಟಾಕ್ ಕೇಳಿಬಂದಿತ್ತು ಮತ್ತು ಹಲವು ದೇಶಗಳಲ್ಲಿ ಚಿತ್ರದ ಪ್ರದರ್ಶನವನ್ನು ನಿಷೇಧಿಸಲಾಗಿತ್ತು. ಆದರೆ ಈ ಯಾವುದೇ ಅಡೆತಡೆಗಳು ಚಿತ್ರದ ಗಳಿಕೆಯ ಮೇಲೆ ಪ್ರಭಾವ ಬೀರಿಲ್ಲ. ಬಿಡುಗಡೆಯಾದ 20ನೇ ದಿನವೂ ಚಿತ್ರವು ಭಾರತದ ಮಾರುಕಟ್ಟೆಯಲ್ಲಿ 17 ಕೋಟಿ ರೂಪಾಯಿ ಗಳಿಸಿ ತನ್ನ ಪ್ರಾಬಲ್ಯ ಮೆರೆದಿದೆ.
ಚಿತ್ರದಲ್ಲಿ ‘ಆದಿತ್ಯ ಧಾರ್’ ಪಾತ್ರದಲ್ಲಿ ರಣವೀರ್ ಸಿಂಗ್ ಮಿಂಚಿದ್ದರೆ, ಅಕ್ಷಯ್ ಖನ್ನಾ ಖಡಕ್ ವಿಲನ್ ಆಗಿ ಕಾಣಿಸಿಕೊಂಡು ಅಭಿಮಾನಿಗಳ ಮನಗೆದ್ದಿದ್ದಾರೆ. ಈ ಯಶಸ್ಸಿನ ಮೂಲಕ ದೀರ್ಘಕಾಲದಿಂದ ತೆರೆಯ ಮರೆಯಲ್ಲಿದ್ದ ಅಕ್ಷಯ್ ಖನ್ನಾ ಅವರಿಗೆ ಬಾಲಿವುಡ್‌ನಲ್ಲಿ ಮರುಜೀವ ಸಿಕ್ಕಂತಾಗಿದೆ. ಸದ್ಯದ ಮಟ್ಟಿಗೆ 2025ರ ಸಾಲಿನಲ್ಲಿ ಸಾವಿರ ಕೋಟಿ ಕಲೆಕ್ಷನ್ ಮಾಡಿದ ಏಕೈಕ ಸಿನಿಮಾ ಎಂಬ ಹಿರಿಮೆಗೆ ‘ಧುರಂಧರ್’ ಪಾತ್ರವಾಗಲಿದೆ.

