Thursday, October 23, 2025

CINE | ರಿಷಬ್ ಶೆಟ್ಟಿ ದರ್ಬಾರ್: ‘ಕಾಂತಾರ: ಚಾಪ್ಟರ್ 1’ ದೀಪಾವಳಿಗೆ ಡಬಲ್ ಡಿಜಿಟ್ ಕಲೆಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಷಬ್ ಶೆಟ್ಟಿ ನಟಿಸಿ-ನಿರ್ದೇಶಿಸಿದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮುಂದುವರೆಸಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಚಿತ್ರವು ಡಬಲ್ ಡಿಜಿಟ್ ಕಲೆಕ್ಷನ್ ಮಾಡುವ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ನಿಜ ಮಾಡಿದೆ. ಸದ್ಯಕ್ಕೆ ವಿಶ್ವಮಟ್ಟದಲ್ಲಿ ಚಿತ್ರದ ಗಳಿಕೆ ರೂ. 800 ಕೋಟಿ ರೂಪಾಯಿ ಗಡಿ ದಾಟಿದೆ.

ಅಕ್ಟೋಬರ್ 2 ರಂದು ತೆರೆಕಂಡ ‘ಕಾಂತಾರ: ಚಾಪ್ಟರ್ 1’ ಸಿನಿಮಾ 20 ದಿನಗಳಲ್ಲಿ ಭಾರತದ ಬಾಕ್ಸ್ ಆಫೀಸ್​ನಲ್ಲಿ ಬರೋಬ್ಬರಿ ರೂ. 547 ಕೋಟಿ ಗಳಿಕೆ ಮಾಡಿದೆ. ಇದು ಚಿತ್ರದ ಸಿನೇಮಾ ಪಯಣದ ಮಹತ್ವದ ಮೈಲಿಗಲ್ಲು. ಅಕ್ಟೋಬರ್ 21 ರಂದು ಮೂರನೇ ಮಂಗಳವಾರವಾದರೂ ಸಿನಿಮಾ ರೂ. 12 ಕೋಟಿ ಗಳಿಸಿದ್ದು, ಕಲೆಕ್ಷನ್ ವೇಗವನ್ನು ಸೂಚಿಸುತ್ತದೆ.

ಇದೇ ರೀತಿ ಮುಂದುವರಿದರೆ, ಭಾರತದಲ್ಲಿಯೇ ಚಿತ್ರವು ರೂ. 600 ಕೋಟಿ ಕ್ಲಬ್ ಸೇರುವ ಸಾಧ್ಯತೆ ಇದ್ದು, ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ರೂ. 1000 ಕೋಟಿ ಗಡಿ ದಾಟಿ ‘ಕೆಜಿಎಫ್ ಚಾಪ್ಟರ್ 2’ ನಂತರ ಆ ಸಾಧನೆ ಮಾಡಿದ ಎರಡನೇ ಕನ್ನಡ ಚಿತ್ರವಾಗುವ ನಿರೀಕ್ಷೆ ಇದೆ.

ಇನ್ನು, ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ‘ಕಾಂತಾರ: ಚಾಪ್ಟರ್ 2’ ಚಿತ್ರದ ಬಗ್ಗೆ ಸುಳಿವು ನೀಡಲಾಗಿದೆ. ಆದರೆ, ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ಇತರೆ ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇರುವುದರಿಂದ, ‘ಕೆಜಿಎಫ್ 3’ ಗಾಗಿ ಕಾಯುವಂತೆಯೇ, ‘ಕಾಂತಾರ: ಚಾಪ್ಟರ್ 2’ ಗಾಗಿಯೂ ಅಭಿಮಾನಿಗಳು ಸ್ವಲ್ಪ ಕಾಲ ಕಾಯಬೇಕಾಗಬಹುದು.

error: Content is protected !!