ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಕ್ರಿಕೆಟ್ ಮತ್ತು ಸಿನಿಮಾ ಅಂದ್ರೆ ಅದೊಂದು ಅವಿನಾಭಾವ ಸಂಬಂಧ. ಈ ಎರಡೂ ಕ್ಷೇತ್ರಗಳ ಸಂಗಮವೇ ಸೆಲೆಬ್ರಿಟಿ ಕ್ರಿಕೆಟ್ ಲೀಗ್. ಕಳೆದ 11 ಸೀಸನ್‌ಗಳಿಂದ ಯಶಸ್ವಿಯಾಗಿ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಸಿಸಿಎಲ್, ಇದೀಗ 12ನೇ ಸೀಸನ್ ಅಬ್ಬರಕ್ಕೆ ಸಜ್ಜಾಗಿದೆ.
2026ರ ಸಿಸಿಎಲ್ ಟೂರ್ನಿಯು ಜನವರಿ 16ರಿಂದ ಆರಂಭವಾಗಲಿದ್ದು, ಫೆಬ್ರವರಿ 1ರವರೆಗೆ ನಡೆಯಲಿದೆ. ವೈಜಾಗ್, ಮಥುರಾ ಮತ್ತು ಹೈದರಾಬಾದ್ ನಗರಗಳು ಈ ಕ್ರಿಕೆಟ್ ಹಬ್ಬಕ್ಕೆ ಆತಿಥ್ಯ ವಹಿಸಲಿವೆ. ಒಟ್ಟು 8 ಪ್ರಾದೇಶಿಕ ಚಿತ್ರರಂಗದ ತಂಡಗಳು ಕಣಕ್ಕಿಳಿಯಲಿದ್ದು, ಪ್ರತಿ ತಂಡಕ್ಕೂ ಆರಂಭಿಕ ಹಂತದಲ್ಲಿ ತಲಾ ಮೂರು ಪಂದ್ಯಗಳಿರಲಿವೆ.
ಉದ್ಘಾಟನಾ ಪಂದ್ಯದಲ್ಲೇ ನಮ್ಮ ಕರುನಾಡಿನ ಹೆಮ್ಮೆ ‘ಕರ್ನಾಟಕ ಬುಲ್ಡೋಜರ್ಸ್’ ಮತ್ತು ಕಳೆದ ಬಾರಿಯ ಚಾಂಪಿಯನ್ಸ್ ‘ಪಂಜಾಬ್ ಡಿ ಶೇರ್’ ಮುಖಾಮುಖಿಯಾಗಲಿವೆ. ಕಿಚ್ಚ ಸುದೀಪ್ ನೇತೃತ್ವದ ಬುಲ್ಡೋಜರ್ಸ್ ತಂಡದಲ್ಲಿ ಡಾರ್ಲಿಂಗ್ ಕೃಷ್ಣ, ಗೋಲ್ಡನ್ ಸ್ಟಾರ್ ಗಣೇಶ್, ಜೆಕೆ, ಪೆಟ್ರೋಲ್ ಪ್ರಸನ್ನ ಅವರಂತಹ ಪ್ರತಿಭಾವಂತ ಆಟಗಾರರ ದಂಡೇ ಇದೆ.
ಸದ್ಯ ಕರ್ನಾಟಕ ಬುಲ್ಡೋಜರ್ಸ್ ತಂಡ ಅಭ್ಯಾಸದಲ್ಲಿ ನಿರತವಾಗಿದ್ದರೂ, ನಾಯಕ ಸುದೀಪ್ ಅವರ ಭಾಗವಹಿಸುವಿಕೆ ಬಗ್ಗೆ ಸಣ್ಣದೊಂದು ಗೊಂದಲ ಉಂಟಾಗಿದೆ. ಮುಂದಿನ ವಾರ ‘ಬಿಗ್ ಬಾಸ್’ ಸೀಸನ್‌ನ ಫಿನಾಲೆ ಇರುವುದರಿಂದ ಮತ್ತು ಟೂರ್ನಿ ಕೂಡ 16ರಿಂದಲೇ ಆರಂಭವಾಗುತ್ತಿರುವುದರಿಂದ, ಸುದೀಪ್ ಮೊದಲ ಪಂದ್ಯಕ್ಕೆ ಲಭ್ಯವಿರುತ್ತಾರೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಟೂರ್ನಿಯಲ್ಲಿರುವ ಪ್ರಮುಖ ತಂಡಗಳು:
ಕರ್ನಾಟಕ ಬುಲ್ಡೋಜರ್ಸ್
ಚೆನ್ನೈ ಕಿಂಗ್ಸ್
ಕೇರಳ ಸ್ಟ್ರೈಕರ್ಸ್
ಮುಂಬೈ ಹೀರೋಸ್
ತೆಲುಗು ವಾರಿಯರ್ಸ್
ಭೋಜ್‌ಪುರಿ ಡಬ್ಬಂಗ್ಸ್
ಪಂಜಾಬ್ ಡಿ ಶೇರ್
ಬೆಂಗಾಲ್ ಟೈಗರ್ಸ್

