ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ‘ಉಳಗನಾಯಗನ್’ ಕಮಲ್ ಹಾಸನ್ ಮೊದಲ ಬಾರಿಗೆ ಜೊತೆಯಾಗಿ ನಟಿಸಬೇಕಿದ್ದ ಬಹುನಿರೀಕ್ಷಿತ ಚಿತ್ರ ‘ತಲೈವರ್ 173’ ಪ್ರಕಟಣೆ ಆದ ಕೆಲವೇ ದಿನಗಳಲ್ಲಿ ಅನಿರೀಕ್ಷಿತ ತಿರುವು ಪಡೆದಿದೆ. ಈ ಮೆಗಾ ಪ್ರಾಜೆಕ್ಟ್‌ಗೆ ಖ್ಯಾತ ನಿರ್ದೇಶಕ ಸುಂದರ್ ಸಿ ಅವರು ನಿರ್ದೇಶನ ಮಾಡಲಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ, ಚಿತ್ರೀಕರಣ ಆರಂಭಕ್ಕೂ ಮೊದಲೇ ಅಭಿಮಾನಿಗಳಿಗೆ ದೊಡ್ಡ ನಿರಾಸೆಯಾಗಿದ್ದು, ಸ್ವತಃ ಸುಂದರ್ ಸಿ ಅವರೇ ಯೋಜನೆಯಿಂದ ಹೊರನಡೆದಿರುವುದಾಗಿ ಪ್ರಕಟಿಸಿದ್ದಾರೆ.
ರಜನಿಕಾಂತ್ ಅವರ ವೃತ್ತಿಜೀವನದ ಕೊನೆಯ ಚಿತ್ರವಾಗಿರಬಹುದು ಎಂಬ ಮಾತುಗಳ ನಡುವೆಯೇ, ಸುಂದರ್ ಸಿ ಅವರು ‘ತಲೈವರ್ 173’ ಪ್ರಾಜೆಕ್ಟ್‌ನಿಂದ ಹೊರಬರುತ್ತಿರುವುದಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ದೃಢಪಡಿಸಿದ್ದಾರೆ. ಕಮಲ್ ಹಾಸನ್ ಅವರ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್’ ಸಂಸ್ಥೆ ನಿರ್ಮಿಸುತ್ತಿರುವ ಈ ಮಹತ್ವದ ಪ್ರಾಜೆಕ್ಟ್‌ನಿಂದ ಸುಂದರ್ ಸಿ ಹಿಂದೆ ಸರಿಯಲು ನಿಖರ ಕಾರಣವೇನು ಎಂಬ ಚರ್ಚೆ ಕಾಲಿವುಡ್‌ನಲ್ಲಿ ಜೋರಾಗಿದೆ.
ನಿರ್ದೇಶಕ ಸುಂದರ್ ಸಿ ಅವರು ತಮ್ಮ ಪೋಸ್ಟ್‌ನಲ್ಲಿ, “ಕೆಲವು ಅನಿರೀಕ್ಷಿತ ಮತ್ತು ಅನಿವಾರ್ಯ ಕಾರಣಗಳಿಂದಾಗಿ, ಪ್ರತಿಷ್ಠಿತ ಯೋಜನೆಯಾದ #ತಲೈವರ್ 173 ನಿಂದ ಹಿಂದೆ ಸರಿಯುವ ಕಠಿಣ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, “ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರೊಂದಿಗೆ ಕೆಲಸ ಮಾಡುವ ಅವಕಾಶವು ನನ್ನ ವೃತ್ತಿಜೀವನದ ಅತ್ಯಂತ ಮಹತ್ವದ ಕ್ಷಣವಾಗಿತ್ತು. ಈ ಇಬ್ಬರು ದಿಗ್ಗಜರೊಂದಿಗಿನ ನನ್ನ ಒಡನಾಟ ಬಹಳ ಹಿಂದಿನಿಂದಲೂ ಇದೆ ಮತ್ತು ನಾನು ಅವರನ್ನು ಯಾವಾಗಲೂ ಅತ್ಯುನ್ನತ ಗೌರವದಿಂದ ಕಾಣುತ್ತೇನೆ. ನಾನು ಈ ಅವಕಾಶದಿಂದ ಹಿಂದೆ ಸರಿಯುತ್ತಿದ್ದರೂ, ಅವರ ಮಾರ್ಗದರ್ಶನ ಮುಂದೆಯೂ ಪಡೆಯುತ್ತೇನೆ” ಎಂದು ಭಾವುಕರಾಗಿ ನುಡಿದಿದ್ದಾರೆ.
ಈ ಮಹೋನ್ನತ ಪ್ರಾಜೆಕ್ಟ್‌ಗಾಗಿ ತಮ್ಮನ್ನು ಪರಿಗಣಿಸಿದ್ದಕ್ಕೆ ಇಬ್ಬರು ನಾಯಕ ನಟರಿಗೂ ಧನ್ಯವಾದ ತಿಳಿಸಿರುವ ಸುಂದರ್ ಸಿ, ಈ ಸುದ್ದಿ ಕೇಳಿ ನಿರಾಶೆಗೊಂಡಿರುವ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದು, ಭವಿಷ್ಯದಲ್ಲಿ ಮನರಂಜನೆಯನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಚಿತ್ರ ಬೆಳವಣಿಗೆ ನಡೆದಿದ್ದು, ಸುಂದರ್ ಸಿ ಅವರ ಪತ್ನಿ, ನಟಿ ಖುಷ್ಬು ಅವರು ಸಹ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಹೇಳಿಕೆಯೊಂದನ್ನು ಪೋಸ್ಟ್ ಮಾಡಿ ಬಳಿಕ ಅದನ್ನು ಡಿಲೀಟ್ ಮಾಡಿರುವುದು ಸಹ ಚರ್ಚೆಗೆ ಗ್ರಾಸವಾಗಿದೆ.

